ಬೆಂಗಳೂರು[ಆ.15]: ರಾಜ್ಯದಲ್ಲಿನ ಅತಿವೃಷ್ಟಿಮತ್ತು ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಚರ್ಚಿಸಿ ನಿರ್ಧಾರ ಮಾಡಲಿದ್ದು, ರಾಜ್ಯಕ್ಕೆ ಕೇಂದ್ರದಿಂದ ಶೀಘ್ರ ಪರಿಹಾರ ದೊರೆಯಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರು ಚರ್ಚಿಸಿ ನಿರ್ಧರಿಸುತ್ತಾರೆ. ಕೇವಲ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳ ವಿವಿಧ ಭಾಗಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕಾಗುತ್ತದೆ. ದೇಶದ ಪ್ರಸ್ತುತ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಗಮನಿಸಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಬಗ್ಗೆ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಲ್ಲವನ್ನೂ ತಿಳಿಸಿದ್ದೇವೆ. ಈಗಾಗಲೇ ಕೇಂದ್ರ ಹಣಕಾಸು ಸಚಿವರು ಹಾಗೂ ಗೃಹಸಚಿವರು ರಾಜ್ಯಕ್ಕೆ ಬಂದು ನೆರೆ ಪರಿಶೀಲಿಸಿ ತೆರಳಿದ್ದಾರೆ. ಆದಷ್ಟುಶೀಘ್ರ ಪರಿಹಾರ ಸಿಗಲಿದೆ ಎಂದರು.