ಬೆಂಗಳೂರು[ಸೆ.12]: ಹುಲಿ (ಡಿಕೆಶಿ) ಬೋನಿನಲ್ಲಿರಲಿ, ಹೊರಗಡೆ ಇರಲಿ ಅದು ಹುಲಿನೇ. ಅದು ಸೌಮ್ಯವಾಗಿದೆ ಎಂಬ ಕಾರಣಕ್ಕೆ ಆಟ ಆಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಒಕ್ಕಲಿಗರ ರಾಜಕೀಯ ಶಕ್ತಿ ಹತ್ತಿಕ್ಕುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲ. ಒಕ್ಕಲಿಗರು ಎಷ್ಟುಒಳ್ಳೆಯವರೋ ಅವರ ಸಾತ್ವಿಕ ಸಿಟ್ಟು ಅಷ್ಟೇ ಕೆಟ್ಟದ್ದು ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ರಾಜ್ಯ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ ಬುಧವಾರ ಕರೆ ನೀಡಿದ್ದ ಬೃಹತ್‌ ಪ್ರತಿಭಟನಾ ರಾರ‍ಯಲಿ ಬಳಿಕ ಪ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನಾಕಾರರ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ನಾವೀಗಾಗಲೇ ಒಬ್ಬ ಸಿದ್ಧಾಥ್‌ರ್‍ನನ್ನು ಕಳೆದುಕೊಂಡಿದ್ದೇವೆ. ಸಿದ್ಧಾರ್ಥ್ ಯಾವುದೇ ಅಪರಾಧ ಮಾಡದೆ ಇಹಲೋಕ ತ್ಯಜಿಸಿದರು. ಡಿ.ಕೆ.ಶಿವಕುಮಾರ್‌ ಎರಡನೇ ಸಿದ್ಧಾಥ್‌ರ್‍ ಆಗಬಾರದು. ಅವರ ತಂದೆ ಕಾರ್ಯ ಮಾಡಲು ಇ.ಡಿ.ಯವರು ಬಿಡಬೇಕಿತ್ತು. ಬಿಡದಿರುವುದು ಇಡೀ ಒಕ್ಕಲಿಗರ ಸಮುದಾಯಕ್ಕೆ ನೋವು ತಂದಿದೆ. ಅವಕಾಶ ನೀಡಿದ್ದರೆ ಅವರೇನೂ ಓಡಿ ಹೋಗುತ್ತಿದ್ದರಾ? ಮತ್ತೆ ವಿಚಾರಣೆಗೆ ಹಾಜರಾಗುತ್ತಿದ್ದರು. ಈಗ ಏನೂ ಅರಿಯದ ಶಿವಕುಮಾರ್‌ ಅವರ ಮಗಳಿಗೂ ಸಮನ್ಸ್‌ ನೀಡಲಾಗಿದೆ. ಒಕ್ಕಲಿಗರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಡಿಕೆಶಿ ಬಂಧನ ವಿರೋಧಿಸಿ ರ‍್ಯಾಲಿ: BMTC ಬಸ್‌ಗೆ ಬಿತ್ತು ಕಲ್ಲು!

ಸಮುದಾಯ ಬಹಳ ಪೆಟ್ಟು ತಿಂದಿದೆ. ನಾನು ಕಾನೂನು ಪ್ರಶ್ನಿಸಲು ಹೋಗುವುದಿಲ್ಲ. ಮೋದಿ ಅವರು ಇನ್ನಷ್ಟುಪ್ರಕಾಶಿಸಲಿ. ಆದರೆ, ಅದಕ್ಕೂ ಮುನ್ನ ತಮ್ಮ ಕೆಳಗಿರುವ ಕತ್ತಲನ್ನು ಮರೆಯಬಾರದು. ಬಿಜೆಪಿಗೂ ಒಕ್ಕಲಿಗ ಸಮುದಾಯದ ಕೊಡುಗೆ ಇದೆ ಎಂಬುದನ್ನು ಮರೆಯಬಾರದು. ಒಕ್ಕಲಿಗ ಶಕ್ತಿ ಹತ್ತಿಕ್ಕುವ ಪ್ರಯತ್ನ ಮುಂದುವರೆದರೆ ಒಕ್ಕಲಿಗರ ಹೋರಾಟ ತೀವ್ರಗೊಳ್ಳಲಿದೆ. ಈಗಿನ ರಾರ‍ಯಲಿಗಿಂತ ನಾಲ್ಕು ಪಟ್ಟು ಹೆಚ್ಚು ಜನ ಸೇರುತ್ತಾರೆ. ಎಲ್ಲಾ ಧಾರ್ಮಿಕ ಕೇಂದ್ರಗಳೂ ಸಮುದಾಯದ ಜತೆ ಇರಲಿವೆ ಎಂದು ಎಚ್ಚರಿಕೆ ನೀಡಿದರು.

ಡಿ.ಕೆ.ಶಿವಕುಮಾರ್‌ ಅಪರಾಧ ಸಾಬೀತಾಗದೆ ಹೊರಬಂದರೆ ಸಂತೋಷ ಪಡುತ್ತೇನೆ ಎಂದ ಸ್ವಾಮೀಜಿ, ಈಗ ಅವರ ಧ್ವನಿಯೇ ಕಡಿಮೆಯಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಟಾಂಗ್‌ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಕರವೇಗೂ ನಾನು ಈ ಹೋರಾಟದಲ್ಲಿ ಪಾಲ್ಗೊಂಡಿರುವುದಕ್ಕು ಸಂಬಂಧವಿಲ್ಲ. ನಾನೊಬ್ಬ ಒಕ್ಕಲಿಗ ಸಮುದಾಯದವನಾಗಿ ಪಾಲ್ಗೊಂಡಿದ್ದೇನೆ. ಒಕ್ಕಲಿಗರ ಶಕ್ತಿ ಹತ್ತಿಕ್ಕುವ ಕೆಲಸಕ್ಕೆ ಯಾರೇ ಕೈಹಾಕಿದರೂ ಸುಮ್ಮನೆ ಕೂರುವುದಿಲ್ಲ. ಕೇಂದ್ರ ಸರ್ಕಾರ ಸೇಡಿನ ರಾಜಕೀಯ ನಿಲ್ಲಿಸಿ ಕೂಡಲೇ ಡಿ.ಕೆ.ಶಿವಕುಮಾರ್‌ ಅವರನ್ನು ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಡಿಕೆಶಿಗೆ ಗಾಯದ ಮೇಲೆ ಬರೆ: ತಂದೆ ಬೆನ್ನಲ್ಲೇ ಮಗಳು ಐಶ್ವರ್ಯಾ ವಿಚಾರಣೆ!

ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌, ಮಾಜಿ ಮೇಯರ್‌ ಪದ್ಮಾವತಿ, ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.