ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾ ನಟ ನಂದಮುರಿ ಬಾಲಕೃಷ್ಣರವರ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಬಾಲಕೃಷ್ಣ ತನ್ನೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಬಂದ ಅಭಿಮಾನಿಯೊಬ್ಬರಿಗೆ ಥಳಿಸಿರುವ ದೃಶ್ಯಾವಳಿಗಳು ಸೆರೆಯಾಗಿವೆ. ಇಂಟರ್ನೆಟ್'ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಬುಧವಾರದಂದು ರಾತ್ರಿ ನಡೆದ ಘಟನೆಯದ್ದು ಎಂದು ಹೇಳಲಾಗುತ್ತಿತ್ತು. ಈ ವಿಡಿಯೋದಲ್ಲಿ ಬಾಲಕೃಷ್ಣ ಸಿಟ್ಟಿನಿಂದಿರುವುದು ಕಂಡು ಬಂದಿದೆ.

ಹೈದರಾಬಾದ್(ಆ.17): ಸೌತ್ ಇಂಡಿಯನ್ ಆ್ಯಕ್ಟರ್ ನಂದಮುರಿ ಬಾಲಕೃಷ್ಣ ತನ್ನ ಕೋಪದಿಂದಲೇ ಫೇಮಸ್ ಆದವರು. ಬುಧವಾರದಂದು ರಾಥ್ರಿ ಅವರು ಹೈದರಾಬಾದ್'ನಿಂದ 200ಕಿ. ಮೀ ದೂರದಲ್ಲಿರುವ ನಂದಯಾಲ ಉಪ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ವಿಡಿಯೋದಲ್ಲಿ ತೆಲುಗು ದೇಶಂ ಪಾರ್ಟಿಯ ನೇತಾರ ನಟ ಬಾಲಕೃಷ್ಣರವರನ್ನು ಬೆಂಬಲಿಗರು ಮತ್ತು ಅಭಿಮಾನಿಗಳು ಸುತ್ತುವರೆದಿದ್ದರು. ಆದರೆ ಈ ನಡುವೆ ಅಭಿಮಾನಿಯೊಬ್ಬ ಬಾಲಕೃಷ್ಣರೊಂದಿಗೆ ಸೆಲ್ಫೀ ತೆಗೆಸಿಕೊಳ್ಳುವ ಧಾವಂತದಲ್ಲಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಸಿಟ್ಟಾದ ನಂದಮುರಿ ಆ ವ್ಯಕ್ತಿಯ ಕೆನ್ನೆಗೆ ಬಾರಿಸಿ ಮುಂದೆ ಹೋಗುತ್ತಾರೆ.

ಬಾಲಕೃಷ್ಣ ಹೀಗೆ ಸಾರ್ವಜನಿಕವಾಗಿ ಹೊಡೆಯುವುದು ಇದೇ ಮೊದಲಲ್ಲ, ಆಗಸ್ಟ್ ಮೊದಲ ವಾರದಲ್ಲಿ ಫಿಲ್ಮ್ ಸೆಟ್'ನಲ್ಲಾದ ಘಟನೆಯೊಂದರ ವಿಡಿಯೋ ಒಂದು ಲೀಕ್ ಆಗಿದ್ದು, ಇದರಲ್ಲಿ ನಂದಮುರಿ ಫಿಲ್ಮ್ ಸೆಟ್'ನಲ್ಲಿ ಓರ್ವ ಸಹಾಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ತನ್ನ ಶೂಗಳಿಂದಲೂ ಹೊಡೆದಿದ್ದರು ಎಂದು ತಿಳಿಸದು ಬಂದಿದೆ.