ಮೆಟ್ರೋ ಹಸಿರು ಮಾರ್ಗದಲ್ಲಿ ಪೂರ್ಣ ಪ್ರಮಾಣದ ಪ್ರಯೋಗಾರ್ಥ ಸಂಚಾರವು ಸೋಮವಾರ ರಾತ್ರಿಯಿಂದ ಆರಂಭಗೊಂಡಿದೆ. ರೈಲ್ವೇ ಸುರಕ್ಷತಾ ಆಯುಕ್ತರು ಪ್ರಯಾಣಿಕರ ಸಂಚಾರಕ್ಕೆ ಸುರಕ್ಷತಾ ಪ್ರಮಾಣಪತ್ರ ನೀಡಿದ ಬಳಿಕ 3 ಕೋಚ್‌(ಬೋಗಿ)ಗಳ ಹಸಿರು ಬಣ್ಣದ ರೈಲು ಮಂಗಳವಾರ ದಿನವಿಡೀ ಹಸಿರು ಮಾರ್ಗದುದ್ದಕ್ಕೂ ಪ್ರಯೋಗಾರ್ಥ ಸಂಚಾರ ನಡೆಸಿದೆ.
ಬೆಂಗಳೂರು(ಜೂನ್ 14): "ನಮ್ಮ ಮೆಟ್ರೋ" ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗಗಳ ನಡುವೆ ಕೇವಲ 45 ನಿಮಿಷಗಳಲ್ಲಿ ಸಂಪರ್ಕಿಸಲಿದೆ. ಬಸ್ಸು, ಕಾರು ಅಥವಾ ದ್ವಿಚಕ್ರ ವಾಹನಗಳ ಮೂಲಕ ಕನಿಷ್ಠವೆಂದರೂ 3 ಗಂಟೆ ತಗಲುವ ಪ್ರಯಾಣವನ್ನು ಇನ್ನು ಮೆಟ್ರೋ ರೈಲಿನಲ್ಲಿ 45 ನಿಮಿಷಗಳಲ್ಲಿ ಪೂರೈಸಬಹುದು.
ಸೋಮವಾರ ರಾತ್ರಿ ಮತ್ತು ಮಂಗಳವಾರ ಪ್ರಾಯೋಗಿಕ ಸಂಚಾರದ ವೇಳೆ ನಮ್ಮ ಮೆಟ್ರೋ ರೈಲು ಈ ಅಂತರವನ್ನು 45 ನಿಮಿಷಗಳಲ್ಲಿ ಕ್ರಮಿಸಿದೆ. ಮಹತ್ವದ ಅಂಶವೆಂದರೆ, ಈ ಅವಧಿಯಲ್ಲಿ ಮಾರ್ಗಮಧ್ಯದ 25 ನಿಲ್ದಾಣಗಳ ನಿಲುಗಡೆ (ಒಂದು ನಿಮಿಷ) ಯನ್ನು ಸಹ ಸೇರಿದೆ ಎಂದು ಮೆಟ್ರೋ ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ನಡೆದ ಈ ಸಂಚಾರದಿಂದ ಮೆಟ್ರೋ ಹಸಿರು ಮಾರ್ಗವು ಬೆಂಗಳೂರಿನ ಉತ್ತರ ಭಾಗದ ನಾಗಸಂದ್ರ ಮತ್ತು ದಕ್ಷಿಣ ಭಾಗದ ಯಲಚೇನಹಳ್ಳಿಗಳ ನಡುವಿನ 24.20 ಕಿಮೀ ದೂರವನ್ನು 1 ಗಂಟೆಗಳೊಳಗೆ ಪೂರೈಸುವುದು ಖಾತರಿಯಾದಂತಾಗಿದೆ.
ಈ ಮಾರ್ಗ ಪೂರ್ಣಗೊಳ್ಳುವುದರೊಂದಿಗೆ ಮೆಟ್ರೋ ಮೊದಲ ಹಂತ (ನೇರಳೆ (ಉತ್ತರದಕ್ಷಿಣ ಮಾರ್ಗ) ಹಾಗೂ ಹಸಿರು ಮಾರ್ಗ (ಪೂರ್ವ-ಪಶ್ಚಿಮ) ಸಂಪೂರ್ಣ ಗೊಂಡಂತಾಗಿದೆ. ಈ ಹಂತವೂ ಒಟ್ಟು 42.30 ಕಿಮೀನಷ್ಟಿದ್ದು, 42 ನಿಲ್ದಾಣಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ಮೆಟ್ರೋ 45 ಪ್ರಮುಖ ಪ್ರದೇಶಗಳನ್ನು ಹಾದು ಹೋಗಲಿದೆ.
ಮೆಟ್ರೋ ಹಸಿರು ಮಾರ್ಗದಲ್ಲಿ ಪೂರ್ಣ ಪ್ರಮಾಣದ ಪ್ರಯೋಗಾರ್ಥ ಸಂಚಾರವು ಸೋಮವಾರ ರಾತ್ರಿಯಿಂದ ಆರಂಭಗೊಂಡಿದೆ. ರೈಲ್ವೇ ಸುರಕ್ಷತಾ ಆಯುಕ್ತರು ಪ್ರಯಾಣಿಕರ ಸಂಚಾರಕ್ಕೆ ಸುರಕ್ಷತಾ ಪ್ರಮಾಣಪತ್ರ ನೀಡಿದ ಬಳಿಕ 3 ಕೋಚ್(ಬೋಗಿ)ಗಳ ಹಸಿರು ಬಣ್ಣದ ರೈಲು ಮಂಗಳವಾರ ದಿನವಿಡೀ ಹಸಿರು ಮಾರ್ಗದುದ್ದಕ್ಕೂ ಪ್ರಯೋಗಾರ್ಥ ಸಂಚಾರ ನಡೆಸಿದೆ. ಮೊದಲ ದಿನದ ಸಂಚಾರ ಸಂಪೂರ್ಣ ಯಶಸ್ವಿಯಾಗಿದೆ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್'ಸಿಂಗ್ ಖರೋಲಾ ‘ಕನ್ನಡಪ್ರಭ' ಕ್ಕೆ ತಿಳಿಸಿದರು.
45 ನಿಮಿಷಗಳಲ್ಲೇ ಹಸಿರು ಮಾರ್ಗದ ಪ್ರಯಾಣವು ಪೂರ್ಣಗೊಂಡಿದೆ. ಎಲ್ಲಾ ಮಾನದಂಡಗಳ ಪರೀಕ್ಷೆ ನಡೆಸಲಾಗಿದ್ದು ಎಲ್ಲಾ ವ್ಯವಸ್ಥೆಯೂ ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸಿದ್ದನ್ನು ಖಾತರಿಪಡಿಸಿಕೊಳ್ಳಲಾಗಿದೆ ಎಂದರು.
ಇಂದೂ ಪರೀಕ್ಷೆ ಮುಂದುವರಿಕೆ: ಸೋಮವಾರ ರಾತ್ರಿ ಮತ್ತು ಮಂಗಳವಾರ ಹಸಿರು ರೈಲು ನಾಗಸಂದ್ರದಿಂದ ಸಂಪಿಗೆ ರಸ್ತೆವರೆಗೂ ಪ್ರಯಾ ಣಿಕರೊಂದಿಗೆ ಸಂಚರಿಸಿದೆ. ಅನಂತರ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿವರೆಗೂ ಪ್ರಯಾಣಿಕ ರಿಲ್ಲದೇ ಸಂಚರಿಸಿದೆ. ಪ್ರಯಾಣಿಕರಿ ಲ್ಲದೇ ಸಂಚರಿಸಿದ್ದರೂ ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ ಮಾಡಲಾಗಿದೆ. ಇದೇ ರೀತಿಯಾಗಿ ಮತ್ತೊಂದು ರೈಲು ಯಲಚೇನಹಳ್ಳಿಯಿಂದ ಹೊರಟು ಸಂಪಿಗೆ ರಸ್ತೆಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ನಾಗಸಂದ್ರದವರೆಗೂ ಪ್ರಯಾಣಿಸಿದೆ.
ಪ್ರಾಯೋಗಿಕ ಸಂಚಾರದ ವೇಳೆ ಪ್ರಮುಖವಾಗಿ ಸಿಗ್ನಲ್ ವ್ಯವಸ್ಥೆ, ನಿಲ್ದಾಣ ಮತ್ತು ರೈಲುಗಳ ಒಳಗಿನ ಘೋಷಣೆಗಳು, ಸೂಚನಾ ಫಲಕಗಳಲ್ಲಿ ಸೂಚನೆಗಳ ಬಿತ್ತರ, ಪ್ರಯಾಣಿಕರು ಇಳಿಯಲು ಮತ್ತು ಹತ್ತಲು ಸಮಯಾವಕಾಶ, ರೈಲಿನ ವೇಗ, ಕರಾರುವಾಕ್ ನಿಲುಗಡೆ, ಪ್ರಯಾಣಿಕರ ಸುರಕ್ಷತೆ, ರೈಲು ನಿಲ್ದಾಣಗಳಲ್ಲಿ ಟಿಕೆಟಿಂಗ್ ವ್ಯವಸ್ಥೆ, ಸಿಬ್ಬಂದಿ ಸನ್ನದ್ಧತೆ, ಅವರಿಗೆ ವಹಿಸಲಾಗಿರುವ ಜವಾಬ್ಧಾರಿಗಳ ನಿರ್ವಹಣೆ ಎಲ್ಲವೂ ಸಮರ್ಪಕವಾಗಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ. ಬುಧವಾರವೂ ಇದೇ ರೀತಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸಿಎಂ ಪರಿಶೀಲನೆ:
ಕೆಂಪೇಗೌಡ ಮೆಟ್ರೋ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಜೆ 5.30 ಗಂಟೆಗೆ ಪರಿಶೀಲಿಸಲಿದ್ದಾರೆ. ಕೆಂಪೇಗೌಡ (ಮೆಜೆಸ್ಟಿಕ್) ಮೆಟ್ರೋ ನಿಲ್ದಾಣವು ಏಷ್ಯಾಖಂಡದಲ್ಲೇ ಅತಿ ದೊಡ್ಡ ಮೆಟ್ರೋ ರೈಲು ನಿಲ್ದಾಣವೆಂಬ ಖ್ಯಾತಿಗೆ ಪಾತ್ರವಾಗಿದೆ. ಮಾತ್ರವಲ್ಲ ಎರಡು ಅಂತಸ್ತುಗಳಲ್ಲಿ ನೆಲದಾಳದಲ್ಲಿ ರೈಲು ಸಂಚರಿಸಲಿದೆ. ಕೆಂಪೇಗೌಡ ನಿಲ್ದಾಣವು ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ಭಾಗಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದೆ. ಮೆಟ್ರೋ ಕೆಂಪೇಗೌಡ ನಿಲ್ದಾಣ ದಕ್ಷಿಣ ಪ್ರವೇಶ ದ್ವಾರ(ಉಪ್ಪಾರಪೇಟೆ ಪೊಲೀಸ್ ಠಾಣೆ ಸಮೀಪ)ದಿಂದ ಸಿಎಂ ಪರಿಶೀಲನೆ ನಡೆಸಲಿದ್ದು ನಿಲ್ದಾಣದಲ್ಲಿನ ಹಸಿರು ಮಾರ್ಗದ ವೀಕ್ಷಣೆ ಮಾಡಲಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
