ಬೆಂಗಳೂರು (ಜು.11): ಮೆಟ್ರೋ ನೌಕರರು ಮುಷ್ಕರ ನಡೆಸದಂತೆ ‘ನಮ್ಮ ಮೆಟ್ರೋ’ವನ್ನು ಅಗತ್ಯ ಸೇವಾ ಕಾಯ್ದೆ (ಎಸ್ಮಾ) ವ್ಯಾಪ್ತಿಗೆ ತಂದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮೆಟ್ರೋ ನೌಕರರರ ಸಂಘಟನೆ ಸಜ್ಜಾಗುತ್ತಿದೆ.
ಈ ಮಧ್ಯ ಇತ್ತೀಚೆಗೆ ಮೆಟ್ರೋ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಆಡಳಿತ ಮಂಡಳಿ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸದ ಹಿನ್ನೆಲೆಯಲ್ಲಿ ಮತ್ತೇ ಅಸಮಧಾನ ಯಾವುದೇ ಸಂದರ್ಭದಲ್ಲಿ ಸಿಡಿದೇಳುವ ಸಾಧ್ಯತೆ ಇದೆ.
 
ಕಳೆದ ಶುಕ್ರವಾರ ಮೆಟ್ರೋ ಕಾರ್ಮಿಕರು ಮುಷ್ಕರ ನಡೆಸಿದಾಗ  ಆಡಳಿತ ಮಂಡಳಿ ಕೆಲವು ಭರವಸೆ ನೀಡಿತ್ತು. ಆದರೆ ಮುರ್ನಾಲ್ಕು ದಿನ ಕಳೆದೂರು ಯಾವುದೇ ಭರವಸೆ ಈಡೇರಿಸದೇ ಇರುವುದು ನೌಕರರ ಅಸಮಧಾನಕ್ಕೆ ಕಾರಣವಾಗಿದೆ. ಮಾತುಕತೆ ವೇಳೆ  ಮೆಟ್ರೋ ನೌಕರರ ಮೇಲೆ ಹೂಡಲಾಗಿರುವ ಎಲ್ಲ ಪ್ರಕರಣಗಳನ್ನೂ ವಾಪಸ್ ಪಡೆಯಬೇಕು ಹಾಗೂ ಯಾವೊಬ್ಬ ನೌಕರರ ವಿರುದ್ಧವೂ ಪ್ರಕರಣದ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಜರುಗಿಸಕೂಡದು ಎಂಬ ಷರತ್ತುಗಳಿಗೆ ವ್ಯವಸ್ಥಾಪಕ ನಿರ್ದೇಶಕರು ಸಮ್ಮತಿಸಿದ್ದರು. ಬಳಿಕವಷ್ಟೇ ಮುಷ್ಕರ ವಾಪಸ್ ಪಡೆಯುವ ನಿರ್ಧಾರಕ್ಕೆ ಬರಲಾಗಿತ್ತೇ ವಿನ: ಎಸ್ಮಾಕ್ಕೆ ಹೆದರಿ ಮುಷ್ಕರ ಕೈ ಬಿಟ್ಟಿರಲಿಲ್ಲವೆಂದು ಸೂರ್ಯನಾರಾಯಣ ಮೂರ್ತಿ ಹೇಳುತ್ತಾರೆ.
 
ಎಸ್ಮಾ ಜಾರಿ; ನ್ಯಾಯಾಲಯದಲ್ಲಿ ಪ್ರಶ್ನೆ 
ಮೆಟ್ರೋ ನೌಕರರು ನಡೆಸಿದ ಧಿಡೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೆಟ್ರೋ ಸೇವೆಯನ್ನು ಎಸ್ಮಾ ಸೇವೆಗಳಡಿ ತಂದಿತ್ತು. ಆದರೆ ನಮ್ಮ ಮೆಟ್ರೋವನ್ನು ಎಸ್ಮಾದಡಿ ತರಲು ಸಾಧ್ಯವಿಲ್ಲ. ವೆುಟ್ರೋ ಸೇವೆಗಳು ರೈಲ್ವೇ ಅಡಿ ಬರಲಿದ್ದು ರಾಜ್ಯ ಸರ್ಕಾರದ ಕಾನೂನು-ಕಾಯ್ದೆಗಳು ಅನ್ವಯವಾಗುವುದಿಲ್ಲ. ಹೀಗಾಗಿ ವೆುಟ್ರೋವನ್ನು ಎಸ್ಮಾದಡಿ ತರುವುದನ್ನು ನೌಕರರ ಸಂಘಟನೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ  ಎಂದು ಸೂರ್ಯನಾರಾಯಣ ಮೂರ್ತಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು. 
 
ನೌಕರರ ಬೇಡಿಕೆ; ಸಂಘಟನೆಗೆ ಮಾನ್ಯತೆ 
ಮೆಟ್ರೋ ನೌಕರರ ಸಂಘ ಸ್ಥಾಪನೆಯಾಗಿ ವರ್ಷ ಕಳೆದಿದೆ. ಆದರೆ ಸಂಘಕ್ಕೆ  ಇನ್ನೂ ಮಾನ್ಯತೆ ದೊರೆತಿಲ್ಲ. ಕೇಂದ್ರ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಮೆಟ್ರೋ ನೌಕರರ ಸಂಘವು ನೋಂದಣಿಯಾಗಿ ಪ್ರಕರಣ ದಾಖಲಿಸಿದ್ದು ತಮ್ಮ ೨೯ ಬೇಡಿಕೆಗಳ ಪಟ್ಟಿಯನ್ನು (ಚಾರ್ಟರ್ ಆಫ್ ಡಿಮಾಂಡ್ಸ್) ಮುಂದಿಟ್ಟಿದೆ. ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ, ಭತ್ಯೆ ನಿಗದಿ, ದೆಹಲಿ, ಜೈಪುರ ಮೆಟ್ರೋ ನೌಕರರಿಗೆ ನೀಡಿರುವ ಸೌಕರ್ಯ, ಹೆರಿಗೆ ರಜೆ, ನೌಕರರಿಗೆ ವಸತಿಗೃಹಗಳು ಹೀಗೆ ವಿವಿಧ ಬೇಡಿಕೆಗಳನ್ನು ಸಲ್ಲಿಸಿದೆ.  ಕೇಂದ್ರ ಕಾರ್ಮಿಕ ಆಯುಕ್ತರು ಕರೆದಿದ್ದ ಒಂದೂ ವಿಚಾರಣೆಗೂ ಆಡಳಿತ ಮಂಡಳಿ  ಹಾಜರಾಗಿಲ್ಲ. ಈ ಕಾರಣಕ್ಕಾಗಿ ಪ್ರಕರಣವನ್ನು ಟ್ರಿಬ್ಯೂನಲ್ (ಕಾರ್ಮಿಕ ನ್ಯಾಯಮಂಡಳಿ)ಗೆ ಒಪ್ಪಿಸಲಾಗಿದೆ ಎಂದು ಸೂರ್ಯನಾರಾಯಣ ಮೂರ್ತಿ ತಿಳಿಸಿದ್ದು ಸಂಘಟನೆಯನ್ನು ಮಾನ್ಯ ಮಾಡುವ ಬೇಡಿಕೆಯನ್ನೂ ಮುಷ್ಕರದ ಮಾತುಕತೆ ವೇಳೆ ಇಡಲಾಗಿತ್ತು ಎಂದರು. 
 
ಮುಷ್ಕರಕ್ಕೆ ಹಲವು ಕಾರಣ
ಮೆಟ್ರೋ ಮುಷ್ಕರಕ್ಕೆ ಕಾರಣವಾಗಿದ್ದು ನಿಗಮದಲ್ಲಿ ನೌಕರರ ಶೋಷಣೆಯೂ ಕಾರಣ ಎಂದು ಕೆಲ ನೌಕರರು ಹೇಳುತ್ತಾರೆ. ದಿನದ ೧೪ ಗಂಟೆಗಳ ಪಾಳಿ ಕೆಲಸ, ಮಹಿಳಾ ನೌಕರರು ಕನಿಷ್ಟ ಉಪಾಹಾರ, ಚಹಾ, ಕಾಫಿ, ಕುಡಿಯುವ ನೀರೂ ಇಲ್ಲದ ನಿಲ್ದಾಣಗಳಲ್ಲಿ ಕೆಲಸ ಮಾಡುವುದು ಹೀಗೆ ಹಲವಾರು ಸಮಸ್ಯೆಗಳನ್ನು ಆಡಳಿತ ಮಂಡಳಿ ಗಮನಕ್ಕೆ ತರಲಾಗಿತ್ತು. ಆದರೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ನೌಕರರು ಮೆಟ್ರೋ ನೌಕರರ ಮೇಲೆ ಹಲ್ಲೆ ಮಾಡಿದ್ದರಿಂದ ಗಾಯಗೊಂಡ ಸಿಬ್ಬಂದಿ ಆಸ್ಪತ್ರೆಗೆ ದಾಖಲಾದರೂ  ಆಡಳಿತ ಮಂಡಳಿ ಯಾವುದೇ ಕ್ರಮ ವಹಿಸದೇ ಇದ್ದುದು, ಹಲ್ಲೆ ನಡೆಸಿದ ಭದ್ರತಾ ಪಡೆ ನೌಕರರ ವಿರುದ್ಧ ಕನಿಷ್ಟ ದೂರು ನೀಡಲು ಮುಂದಾಗದೇ ಇದ್ದುದು ನೌಕರರನ್ನು ಕೆರಳಿಸಿತ್ತು. ಈ ಕಾರಣಕ್ಕಾಗಿಯೇ ಎಲ್ಲ ನೌಕರರೂ ಧಿಡೀರ್ ಮುಷ್ಕರವನ್ನು ಬೆಂಬಲಿಸಿದರು ಎಂದು ಹೇಳಲಾಗುತ್ತಿದೆ. 
 
ಮೆಟ್ರೋ ನೌಕರರ ಬೇಡಿಕೆಗಳ ಕುರಿತು ಯಾವಾಗ ಸಭೆ ಕರೆಯಬೇಕೆಂಬ ನಿರ್ಧಾರ ಮಾಡಲಾಗಿಲ್ಲ. ನೌಕರರ ಸಂಘವನ್ನು ಮಾನ್ಯ ಮಾಡುವ ಕುರಿತೂ ಇದುವರೆವಿಗೂ ತೀರ್ಮಾನವಾಗಿಲ್ಲ.ನಿಲ್ದಾಣ, ರೈಲುಗಳಲ್ಲಿ ಹಿಂದಿ ಬಳಕೆ ಕುರಿತು ಪ್ರತಿಕ್ರಿಯಿಸುವುದಿಲ್ಲ.
ಪ್ರದೀಪ್‌ಸಿಂಗ್ ಖರೋಲಾ
ವ್ಯವಸ್ಥಾಪಕ ನಿರ್ದೇಶಕ ಬಿಎಂಆರ್‌ಸಿಎಲ್ 
 
ಕರ್ನಾಟಕವು ಅಂಗೀಕರಿಸಿರುವ ಎಸ್ಮಾ ಕಾಯ್ದೆಯಲ್ಲಿ ಮೋಟರ್ ವೆಹಿಕಲ್ ಕಾಯ್ದೆಯಡಿ ಬರುವ ವಾಹನಗಳು ಎಂದಷ್ಟೇ ಇರುವುದರಿಂದ ರೈಲುಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಮ್ಮ ಮೆಟ್ರೋ ರೈಲನ್ನು ಎಸ್ಮಾದಡಿ ತರುವುದು ನ್ಯಾಯ ಸಮ್ಮತವಾಗುವುದಿಲ್ಲ.
ಉದಯ್ ಹೊಳ್ಳ 
ಮಾಜಿ ಅಡ್ವೊಕೇಟ್ ಜನರಲ್