ಬೆಂಗಳೂರಿನಲ್ಲಿ ಎರಡು ದಿನ ಸುರಿದ ಮಹಾಮಳೆಗೆ ಸಾಕಷ್ಟು ನಷ್ಟ ಸಂಭವಿಸಿದ್ದರೂ ‘ನಮ್ಮ ಮೆಟ್ರೋ’ ಮಾತ್ರ ದಾಖಲೆ ಕಲೆಕ್ಷನ್ ಮಾಡಿದೆ. ಆ.16ರಂದು (ಬುಧವಾರ) ಟಿಕೆಟ್ ಮೊತ್ತದ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮೆಟ್ರೋ ಅಂದು ನೇರಳೆ (ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ) ಮತ್ತು ಹಸಿರು (ನಾಗಸಂದ್ರ-ಯಲಚೇನಹಳ್ಳಿ)ಮಾರ್ಗಗಳಲ್ಲಿ 95.76 ಲಕ್ಷ ಸಂಗ್ರಹ ಮಾಡಿದೆ.

ಬೆಂಗಳೂರು(ಆ.18): ಬೆಂಗಳೂರಿನಲ್ಲಿ ಎರಡು ದಿನ ಸುರಿದ ಮಹಾಮಳೆಗೆ ಸಾಕಷ್ಟು ನಷ್ಟ ಸಂಭವಿಸಿದ್ದರೂ ‘ನಮ್ಮ ಮೆಟ್ರೋ’ ಮಾತ್ರ ದಾಖಲೆ ಕಲೆಕ್ಷನ್ ಮಾಡಿದೆ. ಆ.16ರಂದು (ಬುಧವಾರ) ಟಿಕೆಟ್ ಮೊತ್ತದ ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮೆಟ್ರೋ ಅಂದು ನೇರಳೆ (ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ) ಮತ್ತು ಹಸಿರು (ನಾಗಸಂದ್ರ-ಯಲಚೇನಹಳ್ಳಿ)ಮಾರ್ಗಗಳಲ್ಲಿ 95.76 ಲಕ್ಷ ಸಂಗ್ರಹ ಮಾಡಿದೆ.

ಸೋಮವಾರ ಮತ್ತು ಮಂಗಳವಾರದ ಮಹಾ ಮಳೆಗೆ ಬೆಚ್ಚಿ ಬಿದ್ದ ನಗರದ ಜನತೆ ಬುಧವಾರ ತಮ್ಮ ವಾಹನಗಳನ್ನು ಬಳಸದೇ ಮೆಟ್ರೋ ಮೊರೆ ಹೋಗಿದ್ದರಿಂದ ಬುಧವಾರ ಬಂಪರ್ ಕಲೆಕ್ಷನ್ ಬಂದಿದೆ. ಅಂದು ಒಟ್ಟು 3,50,060 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಆದರೆ ಆಗಸ್ಟ್ 11ರಂದು 3,57,589 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದು ಇದುವರೆಗಿನ ದಾಖಲೆ ಆಗಿದ್ದರೂ ಅಂದು ಸಂಗ್ರಹವಾಗಿದ್ದ ಹಣ 88.96 ಲಕ್ಷ.

ಆದರೆ ಬುಧವಾರ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ 3.5ಲಕ್ಷ ಆಗಿದ್ದರೂ ಬಹುಪಾಲು ಜನರು ದೂರದ ಪ್ರಯಾಣ ಮಾಡಿದ್ದರಿಂದ ಕಲೆಕ್ಷನ್ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ನಮ್ಮ ವೆುಟ್ರೋ ರೈಲು ನಿಗಮದ ವಾಣಿಜ್ಯ ವಿಭಾಗದ ಜನರಲ್ ಮ್ಯಾನೇಜರ್ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಬೆಂಗಳೂರು ನಗರದ ಹಲವೆಡೆ ಸೋಮವಾರ ರಾತ್ರಿ ಶತಮಾನದ ದಾಖಲೆ ಮಳೆ ಸುರಿದು ಕೆಲ ಭಾಗಗಳು ಮುಳುಗಡೆ ಆಗಿದ್ದವು. ಮಂಗಳವಾರವೂ ಮಳೆ ಮುಂದುವರೆದಿತ್ತು. ಹೀಗಾಗಿ ಬುಧವಾರ ಅನೇಕರು ತಮ್ಮ ವಾಹನಗಳನ್ನು ರಸ್ತೆಗಿಳಿಸುವ ಧೈರ್ಯ ಮಾಡದೇ ಅನೇಕರು ಮೆಟ್ರೋ ಹತ್ತಿದ್ದಾರೆ. ಹೀಗಾಗಿ ಮೆಟ್ರೋಗೆ ಬುಧವಾರ ಬಂಪರ್ ಆಗಿದೆ.