Asianet Suvarna News Asianet Suvarna News

ಬಿಎಂಪಿಸಿ ಗಮನಕ್ಕೆ ಬಾರದ ಮಾಸ್ಟರ್ ಪ್ಲ್ಯಾನ್ : ನಮ್ಮ ಬೆಂಗಳೂರು ಪ್ರತಿಷ್ಠಾನದ ಆರೋಪ

ರಾಜ್ಯ ಸರ್ಕಾರವು ಮೇಲ್ಸೇತುವೆ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಬರೋಬ್ಬರಿ 22 ಸಾವಿರ ಕೋಟಿ ವೆಚ್ಚ ಮಾಡಲು ಚಿಂತಿಸಿರುವುದು ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದೆ

Namma Bengaluru Foundation Blame Govt

ಬೆಂಗಳೂರು (ಡಿ.7): ಬೆಂಗಳೂರಿನ ಯೋಜಿತ ಬೆಳವಣಿಗೆಗೆ ಸಂಬಂಸಿದಂತೆ ರೂಪಿಸಲಾಗುವ 2031 ಮಹಾನಕ್ಷೆ (ಮಾಸ್ಟರ್ ಪ್ಲಾನ್) ಅಂತಿಮಗೊಳಿಸುವ ವಿಚಾರವನ್ನು ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಗಮನಕ್ಕೆ ತರದಿರುವುದು ಸರಿಯಲ್ಲ. ರಾಜ್ಯ ಸರ್ಕಾರವು ಮೇಲ್ಸೇತುವೆ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಬರೋಬ್ಬರಿ 22 ಸಾವಿರ ಕೋಟಿ ವೆಚ್ಚ ಮಾಡಲು ಚಿಂತಿಸಿರುವುದು ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಶ್ರೀಧರ ಪಬ್ಬಿಶೆಟ್ಟಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22 ಸಾವಿರ ಕೋಟಿಯನ್ನು ಕೇವಲ ಖಾಸಗಿ ವಾಹನಗಳು ಓಡಾಡಲು ಅನುಕೂಲವಾಗುವ ಯೋಜನೆಗೆ ಬಳಸಬೇಕೆ ಅಥವಾ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಉಪಯೋಗಿಸಬೇಕೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಬೆಂಗಳೂರಿನ ಯೋಜಿತ ಅಭಿವೃದ್ಧಿ ಕುರಿತು ಬಿಎಂಪಿಸಿ ಸಮಿತಿಯೊಂದಿಗೆ ಸರ್ಕಾರ ಚರ್ಚಿಸಬೇಕಿತ್ತು ಎಂದರು.

ಒಂದೊಮ್ಮೆ ಸುಸ್ಥಿರ ಅಭಿವೃದ್ಧಿಯೆಡೆಗೆ ತೆರಳುವ ಆಲೋಚನೆ ಇದ್ದರೆ ನಗರದಲ್ಲಿ ಮೊದಲು ಮೂಲ ಸೌಕರ್ಯಗಳು ಅಭಿವೃದ್ಧಿಯಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಲಸೆ ಕಾರ್ಮಿಕರಿಗೆ ಬೇಕಾದ ಮನೆಗಳನ್ನು ನೀಡಬಹುದಾಗಿತ್ತು. ಒಂದೊಂದು ವಾರ್ಡ್‌ಗೆ 100 ಕೋಟಿ ಹಣ ನೀಡಬಹುದಿತ್ತು ಎಂದು ಹೇಳಿದರು.

2031ರ ಮಹಾನಕ್ಷೆ (ಮಾಸ್ಟರ್ ಪ್ಲ್ಯಾನ್) ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾದಾಗ ಬಿಎಂಪಿಸಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಅದಾದ ನಂತರವೂ ಯೋಜನೆ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸಮಿತಿಯಲ್ಲಿ ಮುಖ್ಯಮಂತ್ರಿಯವರನ್ನೂ ಒಳಗೊಂಡಂತೆ ಒಟ್ಟು 85 ಸದಸ್ಯರಿದ್ದಾರೆ. ಮಾಸ್ಟರ್ ಪ್ಲಾನ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅದನ್ನು ಸಿದ್ಧಪಡಿಸುವ ಹೊಣೆ ಹೊತ್ತಿರುವ ಗುತ್ತಿಗೆ ಸಂಸ್ಥೆ, ಬೆಂಗಳೂರು ಅಭಿವೃದ್ಧಿ ಪ್ರಾಕಾರಕ್ಕೆ ಈಗಾಗಲೇ ಯೋಜನಾ ವರದಿ ಸಲ್ಲಿಸಿದೆ. ಆದರೆ ಯೋಜನಾ ವರದಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಬಿಎಂಪಿಸಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಈ ಅವೈಜ್ಞಾನಿಕ ಬೆಳವಣಿಗೆ ನಿಯಂತ್ರಿಸಲು ಸೂಕ್ತ, ದೀರ್ಘಾವಯ ಹಾಗೂ ಶಾಸನಬದ್ಧ ಯೋಜನೆ ಅಗತ್ಯವಿದೆ. ಹೀಗಾಗಿ ಸಂಬಂಧಪಟ್ಟ ವಿಷಯಗಳನ್ನು ಬಿಎಂಪಿಸಿ ಮುಂದಿಡಲೇಬೇಕು. ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಉತ್ತಮ ವಾತಾವರಣ ಕಲ್ಪಿಸಲು ಸುಸ್ಥಿರ ಮತ್ತು ಸಮಗ್ರ ಯೋಜನೆಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios