ದೇಶದ ಪುರಾತನ ವಿವಿಯಾದ ನಳಂದಾ ವಿವಿಯನ್ನು ಪುನರುಜ್ಜೀವನಗೊಳಿಸುವುದು ಅಂದಿನ ರಾಷ್ಟ್ರಪತಿ ಎ.ಪಿಜೆ ಅಬ್ದುಲ್ ಕಲಾಂ ಅವರ ಕಲ್ಪನೆಯ ಕೂಸಾಗಿತ್ತು. ನೂತನ ನಳಂದಾ ವಿವಿ ನಿರ್ಮಿಸಿದ ನಂತರ 2007ರಿಂದ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೆನ್ ವಿವಿಯ ಮೊದಲ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ನವದೆಹಲಿ(ನ.25): ಬಿಹಾರದ ನಳಂದಾ ವಿವಿಯ ಎರಡನೇ ಕುಲಪತಿ ಜಾರ್ಜ್ ಯೋ ರಾಜಿನಾಮೆ ನೀಡಿದ್ದಾರೆ. ವಿವಿಯ ಸ್ವಾಯತ್ತೆಗೆ ಧಕ್ಕೆ ಬಂದಿದೆ ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಪೂರ್ವ ಸೂಚನೆ ನೀಡದೇ ಇದ್ದ ಕಾರಣಕ್ಕೆ ಹುದ್ದೆ ತ್ಯಜಿಸುತ್ತಿರುವುದಾಗಿ ಯೋ ಹೇಳಿದ್ದಾರೆ.

ನೊಬೆಲ್ ಪುರಸ್ಕೃತ ಅಮಾರ್ತ್ಯ ಸೆನ್ ರಾಜಿನಾಮೆ ನೀಡಿದ್ದ ಸಂದರ್ಭದಲ್ಲಿ, ತಮ್ಮನ್ನು ಆಯ್ಕೆ ಮಾಡಿದಾಗ ವಿವಿ ಸ್ವಾಯತ್ತೆಗೆ ಧಕ್ಕೆ ತರುವಂಥ ಬೆಳವಣಿಗೆ ನಡೆಯದು. ಅದನ್ನು ಕಾಯ್ದುಕೊಳ್ಳಲಾಗುತ್ತದೆ ಎಂದು ವಾಗ್ದಾನ ಮಾಡಲಾಗಿತ್ತು. ಅದು ಅನುಷ್ಠಾನಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹಿರಿಯ ಡೀನ್ ಗೋಪ ಸಬರ್ವಾಲ್‌'ಗೆ ತಾತ್ಕಾಲಿಕ ಕುಲಪತಿಯನ್ನಾಗಿ ನೇಮಕ ಮಾಡುವ ಬಗ್ಗೆಯೂ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇತ್ತೀಚೆಗಷ್ಟೇ ಪ್ರತಿಷ್ಠಿತ ವಿವಿಯ ಆಡಳಿತ ಮಂಡಳಿಗೆ 14 ಮಂದಿ ಸದಸ್ಯರನ್ನು ನೇಮಿಸಿ ಪುನಾರಚನೆ ಮಾಡಿದ್ದರು. ಕುಲಪತಿ ಆಡಳಿತ ಮಂಡಳಿ ಮುಖ್ಯಸ್ಥರಾಗಿರುತ್ತಾರೆ. ವಿವಿಯ ಆಡಳಿತ ಮಂಡಳಿಗೆ ನೂತನ ಸದಸ್ಯರಾಗಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಮುಖ್ಯಸ್ಥ ಲೋಕೇಶ್ ಚಂದ್ರ ಅವರನ್ನು ನೇಮಕ ಮಾಡಲಾಗಿದೆ. ಇದರ ಜತೆಗೆ ಭಾರತ, ಚೀನಾ, ಆಸ್ಟ್ರೇಲಿಯಾ, ಲಾವೋಸ್ ಮತ್ತು ಥೈಲ್ಯಾಂಡ್ ಅನ್ನು ಪ್ರತಿನಿಸುವ ಐವರು ನಾಮನಿರ್ದೇಶನಗೊಂಡ ಸದಸ್ಯರಿರುತ್ತಾರೆ. ಈ ವೇಳೆ ಕುಲಪತಿಯಾದ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲದಿರುವುದರಿಂದ ಯೋ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ದೇಶದ ಪುರಾತನ ವಿವಿಯಾದ ನಳಂದಾ ವಿವಿಯನ್ನು ಪುನರುಜ್ಜೀವನಗೊಳಿಸುವುದು ಅಂದಿನ ರಾಷ್ಟ್ರಪತಿ ಎ.ಪಿಜೆ ಅಬ್ದುಲ್ ಕಲಾಂ ಅವರ ಕಲ್ಪನೆಯ ಕೂಸಾಗಿತ್ತು. ನೂತನ ನಳಂದಾ ವಿವಿ ನಿರ್ಮಿಸಿದ ನಂತರ 2007ರಿಂದ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೆನ್ ವಿವಿಯ ಮೊದಲ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು.