ಬೆಂಗಳೂರು (ಆ. 05):  ರಾಜ್ಯದೆಲ್ಲೆಡೆ ನಾಗರ ಪಂಚಮಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ನಾಗಪ್ಪನಿಗೆ ಪೂಜೆ ಸಲ್ಲಿಸಲು ಭಕ್ತರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹಲವೆಡೆ ಸೋಮವಾರ ಹಬ್ಬದ ಆಚರಣೆ ಸನ್ನದ್ಧರಾಗುತ್ತಿದ್ದರೆ, ಉತ್ತರ ಕರ್ನಾಟಕದ ಕೆಲವೆಡೆ ಭಾನುವಾರವೇ ಸುಮಂಗಲಿಯರು ನಾಗಪ್ಪನ ಮೂರ್ತಿಗೆ ಹಾಲೆರೆದು, ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿಯನ್ನು ಆಚರಿಸಿದರು.

ಮುಂಜಾನೆಯಿಂದಲೇ ದೇವಾಲಯ ಹಾಗೂ ನಾಗರಕಟ್ಟೆಗಳಲ್ಲಿರುವ ನಾಗಪ್ಪನ ಮೂರ್ತಿಗೆ ಕೊಬ್ಬರಿ ಬಟ್ಟಲಿನ ಮೂಲಕ ಹಾಲೆರೆದು, ಕಡ್ಲಿ ಬತ್ತಿ ಹಾಕಿ ಪೂಜೆ ಸಲ್ಲಿಸಿದರು. ತಂಬಿಟ್ಟುಂಡಿ, ಗುಳಿಗೆ ಉಂಡಿ, ಎಳ್ಳು ಉಂಡಿ, ಶೇಂಗಾ ಉಂಡಿಯನ್ನು ನೈವೇದ್ಯವಾಗಿ ನಾಗಪ್ಪನಿಗೆ ಅರ್ಪಿಸಿದರು.

ಇನ್ನು ಹೈದ್ರಾಬಾದ್ ಕರ್ನಾಟಕ, ಕರಾವಳಿ, ಮೈಸೂರು, ಬೆಂಗಳೂರು ಭಾಗ ಜಿಲ್ಲೆಗಳಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಸಿದ್ಧತೆಗಳು ಜೋರಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಹೈಕ ಭಾಗದಲ್ಲಿ ನಾಗರ ಪಂಚಮಿಯ ನಿಮಿತ್ತ ಬಯಲಿನಲ್ಲಿರುವ ದೊಡ್ಡ ದೊಡ್ಡ ಮರಗಳಿಗೆ ಜೋಕಾಲಿ ಕಟ್ಟಲಾಗಿದೆ., ಮಕ್ಕಳಾದಿಯಾಗಿ ದೊಡ್ಡವರು ಜೋಕಾಲಿ ಜೀಕುತ್ತಾ ಖುಷಿಯಿಂದ ದಿನವನ್ನು ಕಳೆಯಲಿದ್ದಾರೆ.

ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಸೋಮವಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ಆಚರಿಸಲಾಗುವುದು ಎಂದು ದೇಗುಲದ ಪ್ರಧಾನ ಅರ್ಚಕರು ತಿಳಿಸಿದ್ದು, ನಾಡಿನೆಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.