ಭಾರತದ ರೋಡ್ ಜಿಮ್ನಾಸ್ಟಿಕ್ಸ್‌ಗೆ ನಾಡಿಯಾ ಕೂಡಾ ಫಿದಾ!
ಭಾರತದ ರೋಡ ಜಿಮ್ನಾಸ್ಟಿಕ್ಸ್‌ಗೆ ನಾಡಿಯಾ ಕೂಡಾ ಫಿದಾ!| ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲೇ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿದ್ದ ವಿದ್ಯಾರ್ಥಿಗಳು| ಅನಾಮಿಕ ವಿದ್ಯಾರ್ಥಿಗಳ ಸಾಧನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್| ವಿದ್ಯಾರ್ಥಿಗಳ ಮನಸಾರೆ ಹೊಗಳಿದ 10ಕ್ಕೆ 10 ಅಂಕ ಖ್ಯಾತಿಯ ನಾಡಿಯಾ
ನವದೆಹಲಿ[ಆ.31]: ಶಾಲೆಗೆ ರಸ್ತೆಯಲ್ಲಿ ನಡೆದು ಹೋಗುವ ವೇಳೆ ಇದ್ದಕ್ಕಿದ್ದಂತೆ ಓರ್ವ ಪುಟ್ಟಬಾಲಕ ಮತ್ತು ಬಾಲಕಿ ಜಿಮ್ನಾಸ್ಟಿಕ್ಸ್ ಮಾದರಿಯಲ್ಲಿ ಕಸರತ್ತು ನಡೆಸುವ ವಿಡಿಯೋವೊಂದು ಕಳೆದ 4-5 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಅಸಂಖ್ಯಾತ ಸಂಖ್ಯೆಯ ಜನ ಮೆಚ್ಚಿಕೊಂಡಿದ್ದಾರೆ. ಈ ಇಬ್ಬರನ್ನೂ ಸರಿಯಾಗಿ ತರಬೇತುಗೊಳಿಸಿದರೆ ಒಲಂಪಿಕ್ಸ್‌ನಲ್ಲಿ ಪದಕ ಖಚಿತ ಎಂಬ ಮಾತುಗಳು ಕೇಳಿಬಂದಿವೆ.
ಅಚ್ಚರಿಯ ವಿಷಯವೆಂದರೆ ಈ ವಿಡಿಯೋವನ್ನು ಇದೀಗ ಮಾಜಿ ವಿಶ್ವ ಚಾಂಪಿಯನ್, ಒಲಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ 5 ಬಾರಿ ಚಿನ್ನದ ಪದಕ ಪಡೆದ ಮತ್ತು ಮೊಟ್ಟಮೊದಲ ಬಾರಿಗೆ ಜಿಮ್ನಾಸ್ಟಿಕ್ಸ್‌ನಲ್ಲಿ 10ಕ್ಕೆ ಹತ್ತೂ ಅಂಕಗಳನ್ನು ಪಡೆದು ಅದ್ವೀತಿಯ ಸಾಧನೆ ಮಾಡಿದ್ದ ರೊಮೇನಿಯಾದ ನಾಡಿಯಾ ಕೊಮಾನೆಸಿ ಕೂಡಾ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಮಕ್ಕಳ ಜಿಮ್ನಾಸ್ಟಿಕ್ ವಿಡಿಯೋ ಸಹಿತವಾಗಿ ಟ್ವೀಟ್ ಮಾಡಿರುವ ರೊಮೇನಿಯಾದ ಜಿಮ್ನಾಸ್ಟ್ ನಾಡಿಯಾ, ‘ಇದು ನಿಜಕ್ಕೂ ಅದ್ಭುತ’ ಎಂದು ಪ್ರಶಂಸಿಸಿದ್ದಾರೆ.
ಯಾರೆಂದು ಗೊತ್ತಿಲ್ಲ: ಅಚ್ಚರಿ ವಿಷಯವೆಂದರೆ ಈ ಮಕ್ಕಳು ಭಾರತದ ಯಾವ ಪ್ರದೇಶದವರು ಎಂಬುದು ಮಾತ್ರ ಇದುವರೆಗೂ ಖಚಿತವಾಗಿಲ್ಲ. ಅಲ್ಲದೆ, ಟ್ವೀಟರ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ ವಿಡಿಯೋ ಬರೋಬ್ಬರಿ 5 ಬಾರಿ ರೀಟ್ವೀಟ್ ಆಗಿದ್ದು, 5 ಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಣೆಯಾಗಿದೆ.