‘ಟ್ವೀಟರ್‌'ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾಗುತ್ತಿದೆ. ರೀ ಟ್ವೀಟ್‌ಗಳ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ರಾಹುಲ್ ಅವರು ಹಿಂದಿಕ್ಕಿದ್ದಾರೆ’ ಎಂಬ ವರದಿಗಳ ಬೆನ್ನಲ್ಲೇ, ತಾವು ಮಾಡುವ ಟ್ವೀಟ್‌'ಗಳನ್ನು ಮರುಟ್ವೀಟ್ ಮಾಡಲು ರಾಹುಲ್ ನಕಲಿ ವ್ಯಕ್ತಿಗಳನ್ನು (‘ಬಾಟ್’- ಆನ್‌ಲೈನ್ ರೋಬೋಟ್) ನೇಮಕ ಮಾಡಿ ಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನವದೆಹಲಿ(ಅ.22): ‘ಟ್ವೀಟರ್‌'ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾಗುತ್ತಿದೆ. ರೀ ಟ್ವೀಟ್‌ಗಳ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ರಾಹುಲ್ ಅವರು ಹಿಂದಿಕ್ಕಿದ್ದಾರೆ’ ಎಂಬ ವರದಿಗಳ ಬೆನ್ನಲ್ಲೇ, ತಾವು ಮಾಡುವ ಟ್ವೀಟ್‌'ಗಳನ್ನು ಮರುಟ್ವೀಟ್ ಮಾಡಲು ರಾಹುಲ್ ನಕಲಿ ವ್ಯಕ್ತಿಗಳನ್ನು (‘ಬಾಟ್’- ಆನ್‌ಲೈನ್ ರೋಬೋಟ್) ನೇಮಕ ಮಾಡಿ ಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಅಮೆರಿಕ- ಪಾಕಿಸ್ತಾನ ಸಂಬಂಧ ಹೊಗಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅ.15ರಂದು ಟ್ವೀಟ್‌ವೊಂದನ್ನು ಮಾಡಿದ್ದರು. ಅದನ್ನು ರೀಟ್ವೀಟ್ ಮಾಡಿದ್ದ ರಾಹುಲ್ ‘ಮೋದಿ ಅವರೇ ಬೇಗ, ಟ್ರಂಪ್ ಅವರಿಗೆ ಒಂದು ಅಪ್ಪುಗೆ ಬೇಕಾಗಿರುವಂತಿದೆ’ ಎಂದು ವ್ಯಂಗ್ಯವಾಡಿದ್ದರು. ತಕ್ಷಣವೇ 20 ಸಾವಿರ ಮಂದಿ ಅದನ್ನು ರೀಟ್ವೀಟ್ ಮಾಡಿದ್ದರು. ಸದ್ಯ 30 ಸಾವಿರ ಮಂದಿ ಅದನ್ನು ಮರುಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಅನ್ನೇ ಕೂಲಂಕುಷವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ ನಕಲಿ ಖಾತೆಗಳಿಂದ ರಾಹುಲ್ ಅವರ ಟ್ವೀಟ್, ರೀಟ್ವೀಟ್ ಆಗಿರುವ ಅಂಶ ಬೆಳಕಿಗೆ ಬಂದಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ರಷ್ಯಾ, ಕಜಕ್‌'ಸ್ತಾನ ಅಥವಾ ಇಂಡೋನೇಷ್ಯಾದ ಗುಣಲಕ್ಷಣಗಳನ್ನು ಹೊಂದಿರುವ ಹೆಸರಿನ ನಕಲಿ ಖಾತೆದಾರರು ರಾಹುಲ್ ಅವರ ಟ್ವೀಟ್‌ಗಳನ್ನು ಮರುಟ್ವೀಟ್ ಮಾಡುತ್ತಿದ್ದಾರೆ. ಹೀಗೆ ರೀಟ್ವೀಟ್ ಮಾಡಿದವರ ‘ಹಿಂಬಾಲಕರು’ (ಫಾಲೋವರ್ಸ್‌) ಸಂಖ್ಯೆ 10ನ್ನೂ ಮೀರುವುದಿಲ್ಲ. ಈ ವ್ಯಕ್ತಿಗಳು ವಿಶ್ವಾದ್ಯಂತ ಯಾವುದೇ ವಿಷಯದ ಕುರಿತು ಮಾಡಲಾದ ಟ್ವೀಟ್ ಗಳನ್ನೂ ರೀಟ್ವೀಟ್ ಮಾಡುತ್ತಿರುವುದು ಕಂಡುಬಂದಿದೆ. ಅದರಲ್ಲಿ ರಾಹುಲ್ ಗಾಂಧಿ ಅವರ ಟ್ವೀಟ್‌ಗಳೂ ಸೇರಿವೆ. ಅಲ್ಲದೆ ಈ ವ್ಯಕ್ತಿಗಳು ಬರೀ ರೀಟ್ವೀಟ್‌'ಗಳನ್ನಷ್ಟೇ ಮಾಡುತ್ತಾರೆಯೇ ಹೊರತು ತಮ್ಮ ಚಿಂತನೆಗಳನ್ನು ಒಳಗೊಂಡ ಯಾವುದೇ ಟ್ವೀಟ್ ಮಾಡಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಮತದಾರರನ್ನು ಡಿಜಿಟಲ್ ವಿಧಾನದ ಮುಖೇನ ಸೆಳೆಯುವ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಆನ್‌ಲೈನ್ ಡೇಟಾ ಅನಾಲಿಟಿಕ್ಸ್ ಸಂಸ್ಥೆ ‘ಕೇಂಬ್ರಿಜ್ ಅನಾಲಿಟಿಕ’ವನ್ನು ಕಾಂಗ್ರೆಸ್ ಸಂಪರ್ಕಿಸಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರಕಟವಾಗಿರುವ ಈ ಸುದ್ದಿ ಸಂಚಲನಕ್ಕೆ ಕಾರಣವಾಗಿದೆ.

ರಾಹುಲ್ ಬಗ್ಗೆ ಸ್ಮತಿ ಲೇವಡಿ:

ರೀಟ್ವೀಟ್ ಮಾಡಲು ನಕಲಿ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿರುವ ಕುರಿತು ರಾಹುಲ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಅಮೇಠಿಯಲ್ಲಿ ಸ್ಪರ್ಧಿಸಿ ಪರಾ‘ವಗೊಂಡಿದ್ದ ಕೇಂದ್ರದ ಹಾಲಿ ವಾರ್ತಾ ಸಚಿವೆ ಸ್ಮತಿ ಇರಾನಿ ಮುಗಿಬಿದ್ದಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷರು ರಷ್ಯಾ, ಇಂಡೋನೇಷ್ಯಾ ಹಾಗೂ ಕಜಕಸ್ತಾನದಲ್ಲಿ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ್ದಾರೆಯೇ ಎಂದು ಲೇವಡಿ ಮಾಡಿದ್ದಾರೆ.

ಆದರೆ ಕಾಂಗ್ರೆಸ್‌'ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು, ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ ಬಳಿಕ ಏನಾಗುತ್ತದೆ ಎಂಬುದು ನಮ್ಮ ನಿಯಂತ್ರಣದಲ್ಲಿಲ್ಲ. ಈ ಬಗ್ಗೆ ಟ್ವೀಟರ್ ಸಂಸ್ಥೆ ಜತೆಗೇ ನೀವು ಮಾತನಾಡಬೇಕು. ನಕಲಿ ವ್ಯಕ್ತಿಗಳ ನೇಮಕ ಕುರಿತ ವರದಿ ವಸ್ತುಶಃ ತಪ್ಪು. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ‘ಬಾಟ್ಸ್ ಜನತಾ ಪಾರ್ಟಿ’ಯನ್ನು ಖುಷಿಪಡಿಸಲು ಮಾಧ್ಯಮಗಳು ತುದಿಗಾಲಿನಲ್ಲಿ ನಿಂತಿವೆ ಎಂಬುದು ನಮಗೆ ಅರ್ಥವಾಗುತ್ತದೆ. ಇಂತಹ ಮಾಧ್ಯಮಗಳು ನಮ್ಮ ಜತೆ ಇರುವಾಗ ನಮಗೆ ನಕಲಿ ವ್ಯಕ್ತಿಗಳು ಏಕೆ ಬೇಕು ಎಂದು ಕುಟುಕಿದ್ದಾರೆ