Asianet Suvarna News Asianet Suvarna News

ಮೊಟ್ಟೆಯಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಮೈಸೂರು ನಾಟಿ ಕೋಳಿ

ಆಗಸ್ಟ್ ಬ್ಯಾಕ್‌ಯಾರ್ಡ್ ಚಿಕನ್ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೈಸೂರು ನಾಟಿ ಕೋಳಿ ಸಂಸ್ಥೆ

mysore nati koli special story

ಮೈಸೂರು(ಸೆ.26), ಮಂಡ್ಯ ಭಾಗದಲ್ಲಿ ನಾಟಿಕೋಳಿ ಸಾರು ತುಂಬಾ ಹೆಸರುವಾಸಿಯಾದ ಖಾದ್ಯ. ಅನೇಕ ಹೊಟೇಲ್‌ಗಳಲ್ಲಿ ಶುದ್ಧ ನಾಟಿ ಕೋಳಿ ಆಹಾರ ದೊರೆಯುವುದು ಕಷ್ಟ. ಆದರೆ ಮೈಸೂರು ನಾಟಿ ಕೋಳಿ ಸಂಸ್ಥೆಯು ಶುದ್ಧ ನಾಟಿ ಕೋಳಿ, ಮೊಟ್ಟೆಯ ಜೊತೆಗೆ ಅನೇಕರಿಗೆ ಉದ್ಯೋಗಾವಕಾಶ ಕಲ್ಪಿಸಿದೆ.

ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಸೇರಿದಂತೆ ಅನೇಕ ಜಿಲ್ಲೆ ವ್ಯಾಪ್ತಿಯಿಂದ ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಒದಗಿಸಿಕೊಟ್ಟಿರುವ ಮೈಸೂರು ನಾಟಿ ಕೋಳಿ ಮತ್ತಷ್ಟು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗದ ಜೊತೆಗೆ, ಸಾವಿರಾರು ರೈತರು ಲಾಭ ಹೊಂದುವಂತೆ ಮಾಡುತ್ತಿದೆ.

ಆಗಸ್ಟ್ ಬ್ಯಾಕ್‌ಯಾರ್ಡ್ ಚಿಕನ್ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮೈಸೂರು ನಾಟಿ ಕೋಳಿ ಸಂಸ್ಥೆಯನ್ನು ಹುಟ್ಟಿಹಾಕಿದ್ದರ ಹಿಂದೆ ಸಂಸ್ಥೆಯ ಸಾಗರ್ ಅರಸ್ ಶ್ರಮವಿದೆ. ಓದಿದ್ದು ಎಂಜಿನಿಯರಿಂಗ್ ಆದರೂ ನಾಟಿ ಕೋಳಿ ಸಾಕಾಣಿಕೆ, ಮೊಟ್ಟೆ ಮತ್ತು ಮಾಂಸ ಮಾರಾಟದತ್ತ ಒಲವು ತೋರಿದರು. ಬೆಲೆ ಏರಿಕೆ ನಡುವೆ ಾರಂ ಕೋಳಿಯೊಂದಿಗೆ ಸ್ಪರ್ಧೆಗಿಳಿದಿರುವ ನಾಟಿ ಕೋಳಿಯು ರೈತರಿಗೆ ವರದಾನವಾಗುತ್ತಿದೆ. ಏಕೆಂದರೆ ಫಾರಂ ಕೋಳಿಯ ಬೆಲೆ ಏರಿಳಿತವಾಗುವ ಸಾಧ್ಯತೆ ಇದೆ. ಆದರೆ ನಾಟಿ ಕೋಳಿಯ ಮೊಟ್ಟೆ ಮತ್ತು ಮಾಂಸಕ್ಕೆ ನಿರ್ದಿಷ್ಟ ಬೆಲೆ ಇದ್ದೇ ಇರುತ್ತದೆ.

ಒಂದು ನಾಟಿಕೋಳಿ ಮೊಟ್ಟೆಯನ್ನು 8ಯಂತೆ ರೈತರಿಂದ ಖರೀದಿಸಲಾಗುತ್ತದೆ. ಮೈಸೂರು ನಾಟಿ ಕೋಳಿ ಮೂಲಕ ಉದ್ಯೋಗ ಸೃಜಿಸಿಕೊಂಡವರಿಂದ ಸಂಸ್ಥೆಯು 10 ದರದಲ್ಲಿ ಮೊಟ್ಟೆ ಖರೀದಿಸುವ ಮೂಲಕ ನಿರುದ್ಯೋಗಿಗಳಿಗೆ ಒಂದಷ್ಟು ಲಾಭ ಮತ್ತು ಕೋಳಿ ಸಾಕುವ ರೈತರಿಗೆ ಉತ್ತಮ ಬೆಲೆಯನ್ನು ನೀಡುತ್ತಿದೆ. ಹೀಗೆ ಖರೀದಿಸಿದ ಮೊಟ್ಟೆಯನ್ನು ಸಂಸ್ಥೆಯು ಮರಿ ಮಾಡಿ ಮತ್ತೆ ರೈತರಿಗೆ 36 ದರದಲ್ಲಿ ಮಾರುತ್ತದೆ.

ಎರಡು, ಮೂರು ತಿಂಗಳು ಕೋಳಿಯನ್ನು ಸಾಕಿದ ರೈತರಿಂದ ಅದೇ ಕೋಳಿಯನ್ನು ಸಂಸ್ಥೆಯು 180 ನೀಡಿ ಖರೀದಿಸುತ್ತದೆ. ಆಗ ಕೋಳಿಯ ತೂಕವು ಸುಮಾರು ಒಂದುಕಾಲು ಕೆಜಿ ಆಗಿರಬೇಕು. ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ಪ್ರತಿ ಕೋಳಿಗೆ 130 ಖರ್ಚು ಬರುತ್ತದೆ. ಇದರಿಂದಾಗಿ ರೈತರಿಗೆ 50 ಲಾಭ ದೊರೆತಂತೆ ಆಗುತ್ತಿದೆ. ಹೀಗೆ ಸಂಸ್ಥೆಯಿಂದಲೇ ಮರಿ ಖರೀದಿಸಿ ಸಾಕಣಿಕೆ ಮಾಡಿ ಹಿಂದಿರುಗಿಸುವ ಕೋಳಿಯನ್ನು ಕೇವಲ ಮಾಂಸಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಅಕ್ಕಪಕ್ಕದ ಗ್ರಾಮಗಳಿಂದ ಮೊಟ್ಟೆ ಮತ್ತು ಕೋಳಿಯನ್ನು ಸಂಗ್ರಹಿಸಿ ತಂದುಕೊಡುವವರಿಗೆ ಪ್ರತಿ ತಿಂಗಳು ಸುಮಾರು 15 ಸಾವಿರ ಲಾಭ ದೊರೆಯುತ್ತಿದೆ.

ಭವಿಷ್ಯದಲ್ಲಿ ಬೆಂಗಳೂರಿನಲ್ಲಿರುವಂತೆ ಬಿಡಿ ಮಾಂಸ ಮಾರಾಟ ವ್ಯವಸ್ಥೆಯನ್ನು ಆರಂಭಿಸುವ ಉದ್ದೇಶ ಇದೆ. ಹಂತ ಹಂತವಾಗಿ ಆರಂಭಿಸಲು ಸಾಗರ್ ಅರಸ್ ತೀರ್ಮಾನಿಸಿದ್ದಾರೆ. ಆ ಮೂಲಕ ಮತ್ತಷ್ಟು ಮಂದಿಗೆ ಉದ್ಯೋಗ ಸೃಜಿಸುವಂತೆ ಮಾಡಲು ಇಚ್ಛಿಸಿದ್ದಾರೆ.

ನಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲಿ ನಾಟಿಕೋಳಿ ಮೊಟ್ಟೆ ದೊರೆಯುತ್ತದೆ ಎಂಬ ಮಾಹಿತಿ ನಮಗೆ ಗೊತ್ತಿರುತ್ತದೆ. ಅದರಂತೆ ಕೋಳಿ ಸಾಕುವ ರೈತರಿಂದ ಮೊಟ್ಟೆ ಸಂಗ್ರಹಿಸಿ ಸಂಸ್ಥೆಗೆ ನೀಡುತ್ತೇವೆ. ಇದರಿಂದ ನಮಗೂ ಒಂದಷ್ಟು ಸಹಾಯವಾಗುತ್ತಿದೆ ಎನ್ನುತ್ತಾರೆ ನಾಟಿ ಕೋಳಿ ಮೊಟ್ಟೆ ಸಂಗ್ರಹಗಾರ - ಹರೀಶ್.

- ಡಿ.ಎನ್. ಮಹೇಂದ್ರ