ಮದುವೆಗೆ ಮುಂಚೆ ನನಗಿದ್ದ ಬಾಯ್‌'ಫ್ರೆಂಡ್'ಗೆ ಹೋಲಿಸಿದರೆ ನೀನೊಬ್ಬ ‘ಹೋಪ್‌ಲೆಸ್ ಫೆಲೋ’ ಎಂದು ತನ್ನನ್ನು ನಿಂದಿಸುತ್ತಿದ್ದ ಹಾಗೂ ಮನೆಯಲ್ಲಿದ್ದ ಸೇಬು ಹಣ್ಣನ್ನು ಅತ್ತೆ ತಿಂದರು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದ ಪತ್ನಿಯಿಂದ ಇಲ್ಲೊಬ್ಬ ಪತಿ ಮುಕ್ತಿ ಬಯಸಿದ್ದಾನೆ.

ಬೆಂಗಳೂರು(ಆ.02): ಮದುವೆಗೆ ಮುಂಚೆ ನನಗಿದ್ದ ಬಾಯ್‌'ಫ್ರೆಂಡ್'ಗೆ ಹೋಲಿಸಿದರೆ ನೀನೊಬ್ಬ ‘ಹೋಪ್‌ಲೆಸ್ ಫೆಲೋ’ ಎಂದು ತನ್ನನ್ನು ನಿಂದಿಸುತ್ತಿದ್ದ ಹಾಗೂ ಮನೆಯಲ್ಲಿದ್ದ ಸೇಬು ಹಣ್ಣನ್ನು ಅತ್ತೆ ತಿಂದರು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದ ಪತ್ನಿಯಿಂದ ಇಲ್ಲೊಬ್ಬ ಪತಿ ಮುಕ್ತಿ ಬಯಸಿದ್ದಾನೆ.

ನನ್ನ ಪತ್ನಿ ನನ್ನ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಕೆಲಸಕ್ಕೆ ಹೋಗಬೇಡ ಅಂದರೆ ಕೇಳುತ್ತಿಲ್ಲ, ಆಕೆಗೆ ಬೇರೆಯವರ ಜೊತೆ ಅಕ್ರಮ ಸಂಬಂಧವಿದೆ ಎಂಬಂತಹ ಕಾರಣ ನೀಡಿ ಪುರುಷರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಹೋಗುವುದುಂಟು. ಆದರೆ, ವಿವಾಹಕ್ಕೂ ಮುನ್ನ ನನಗಿದ್ದ ಬಾಯ್‌'ಫ್ರೆಂಡ್ಸ್'ಗಳಿಗಿಂತ ನೀನು ಅತ್ಯಂತ ವರ್ಸ್ಟ್, ಹೋಪ್‌ಲೆಸ್ ಫೆಲೋ ಎಂದು ನಿಂದಿಸುವ ಪತ್ನಿಯಿಂದ ವಿಚ್ಛೇದನ ಕೋರಿ ಸಾಪ್ಟ್'ವೇರ್ ಎಂಜಿನಿಯರೊಬ್ಬರು ಕೋರ್ಟ್‌ಗೆ ಹೋಗಿದ್ದಾರೆ.

ಸಾವಿರ ಸುಳ್ಳು ಹೇಳಿ ಮದುವೆ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ, ವಿವಾಹಕ್ಕೂ ಮುನ್ನ ನನಗೆ ಇಬ್ಬರು ಬಾಯ್'ಫ್ರೆಂಡ್ಸ್'ಗಳಿದ್ದರು ಎಂಬ ಅಂಶ ತಿಳಿಸಿದ್ದ ಮಹಿಳೆ ಮದುವೆ ಬಳಿಕ, ನನಗಿದ್ದ ಬಾಯ್‌'ಫ್ರೆಂಡ್ಸ್'ಗಳ ಮುಂದೆ ನೀನು ಏನೂ ಇಲ್ಲ. ನಿನ್ನೊಂದಿಗಿನ ವೈವಾಹಿಕ ಜೀವನ ಅತ್ಯಂತ ನೀರಸವಾಗಿದೆ ಎಂದು ಅವಮಾನಿಸಿದ್ದಾರೆ. ಅಲ್ಲದೆ, ನನಗಾಗಿ ತಂದಿಟ್ಟಿದ್ದ ಮೂರು ಸೇಬು ಹಣ್ಣುಗಳನ್ನು ನಿಮ್ಮ ತಾಯಿ ತಿಂದಿದ್ದಾರೆ. ಇದರಿಂದಾಗಿ ನನಗೆ ಮಾನಸಿಕವಾಗಿ ಅತ್ಯಂತ ನೋವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ನಿ ಬೆದರಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡ ಪತಿ ವಿಚ್ಛೇದನ ಕೋರಿ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ.

ಶೈಕ್ಷಣಿಕ ಪ್ರವಾಸದಂತಹ ಹನಿಮೂನ್:

ಜಾಲಹಳ್ಳಿಯ ರವೀಶ್ ಎಂಬುವರು ಖಾಸಗಿ ಐಟಿ ಕಂಪನಿಯಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಕಂಪನಿಯಲ್ಲಿ ಸಾಪ್ಟ್'ವೇರ್ ಎಂಜಿನಿಯರ್ ರಕ್ಷಿತಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಎಂಬುವರ ಪರಿಚಯವಾಗುತ್ತದೆ. ದಿನಗಳು ಕಳೆದಂತೆ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ನಂತರ ಪೋಷಕರ ಒಪ್ಪಿಗೆ ಪಡೆದು 2006ರ ಜನವರಿಯಲ್ಲಿ ವಿವಾಹವಾಗುತ್ತಾರೆ. ವಿವಾಹವಾದ ಬಳಿಕ ರವೀಶ್ ಗೋವಾ, ಮಡಿಕೇರಿ, ಊಟಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳುವ ಮೂಲಕ ರಕ್ಷಿತಾರನ್ನು ಖುಷಿಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಪತ್ನಿ ರಕ್ಷಿತಾ ಮಾತ್ರ ಈ ಪ್ರವಾಸಗಳು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವ ಶೈಕ್ಷಣಿಕ ಪ್ರವಾಸದಂತಿದೆ. ಮಧುಚಂದ್ರಕ್ಕಾಗಿ ವಿದೇಶಕ್ಕೆ ಹೋಗಬೇಕು ಎಂದು ನನ್ನ ಬಯಕೆಯಾಗಿತ್ತು. ಆದರೆ, ಒಮ್ಮೆಯೂ ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲ. ಮದುವೆಗೆ ಮುನ್ನ ಪಬ್ ಮತ್ತು ನೈಟ್ ಕ್ಲಬ್‌ಗೆ ಹೋಗುತ್ತಿದ್ದೆ. ಆದರೆ, ಈಗ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಟೀಕಿಸತೊಡಗಿದರು.

ನಿಮಗೆ ಪಾಶ್ಚಿಮಾತ್ಯ ಸಂಸ್ಕೃತಿ ಅರಿವಿಲ್ಲ. ನಿಮ್ಮೊಂದಿಗೆ ಜೀವನ ಕಷ್ಟ ಎಂದು ಸಂಬಂಧಿಕರು ಹಾಗೂ ಸ್ನೇಹಿತರ ಮುಂದೆ ಅವಮಾನ ಮಾಡುತ್ತಿದ್ದರು. ಜತೆಗೆ ಪ್ರತಿದಿನ ಮಾನಸಿಕ ಹಿಂಸೆ ನೀಡುತ್ತಿದ್ದರು, ಇದರಿಂದ ತಪ್ಪಿಸಿಕೊಳ್ಳಲು ನಿದ್ದೆ ಮಾತ್ರೆ ಸೇವಿಸಿ ಮಲಗುವಂತಾಗಿತ್ತು. ಆದ್ದರಿಂದ ವಿಚ್ಛೇದನ ಮಂಜೂರು ಮಾಡಬೇಕು ಎಂದು ಅರ್ಜಿಯಲ್ಲಿ ಪತಿ ಮನವಿ ಮಾಡಿದ್ದಾರೆ.