ಮಹಾರಾಷ್ಟ್ರ[ಆ.19]: ಜಾತಿ, ಧರ್ಮಕ್ಕಾಗಿ ಜಗಳವಾಡುವ ಘಟನೆಗಳು ಸದ್ದು ಮಾಡುತ್ತಲೇ ಇರುತ್ತವೆ. ಹೀಗಿರುವಾಗ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರ, ಅಸ್ಸಾಂ ಹೀಗೆ ದೇಶದ ನಾನಾ ಭಾಗಗಳಲ್ಲಿ ಮಳೆಯಬ್ಬರದಿಂದ ಉಂಟಾದ ಪ್ರವಾಹದಲ್ಲಿ ಕಂಡು ಬಂದ ದೃಶ್ಯಗಳು ಮಾನವೀಯತೆಯನ್ನು ಎತ್ತಿ ಹಿಡಿದಿವೆ. ಜಾತಿ, ಧರ್ಮದ ದ್ವೇಷವನ್ನು ಮರೆತು ಪರಸ್ಪರ ಸಹಾಯ ಮಾಡುವ ಹಸ್ತ ಚಾಚಿದ್ದಾರೆ.

ಇಂತಹುದೇ ಘಟನೆಗೆ ಸಾಕ್ಷಿಯಾಗಿದೆ ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಇಚಾಲ್ಕಾರಂಜಿ ಗ್ರಾಮ. ಹೌದು ಇಲ್ಲಿನ ಮುಸ್ಲಿಂ ಯುವಕರು, ಪ್ರವಾಹದಿಂದ ಕೆಸರುಮಯವಾಗಿದ್ದ ಗ್ರಾಮದ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ಜಾತ್ಯಾತೀತತೆಯನ್ನು ಪ್ರದರ್ಶಿಸಿದ್ದಾರೆ. 

ಘಟನೆಯನ್ನು ವಿವರಿಸಿದ ಹುಸೇನ್ ಕಲಾವಂತ್ ಎಂಬ ಯುವಕ 'ಶುಕ್ರವಾರ ಬೆಳಗ್ಗೆ ಸುಮಾರು 900ಕ್ಕೂ ಅಧಿಕ ಮುಸ್ಲಿಂ ಯುವಕರು ಇಲ್ಲಿನ ಜಮಾ ಮಸೀದಿ ಎದುರು ಸೇರಿದ್ದಾರೆ. ಬಳಿಕ ಹಲವಾರು ಗುಂಪುಗಳನ್ನು ಮಾಡಿಕೊಂಡ ಅವರು ಗ್ರಾಮದ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದ್ದಾರೆ. ಇವರಲ್ಲಿ ನದಿ ವೇಸ್ ಎಂಬ ಪ್ರದೇಶದ ಸ್ವಚ್ಛತೆಗಾಗಿ ನೇಮಿಸಲಾದ ಒಂದು ತಂಡ ಇಲ್ಲಿನ ಕೆಸರಿನಿಂದ ಕೂಡಿದ್ದ ಮಾರ್ಗುಬಾಯಿ ದೇವಸ್ಥಾನವನ್ನು ಸ್ವಚ್ಛಗೊಳಿಸಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ದೇವಸ್ಥಾನದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಮತ್ತೊಬ್ಬ ಯುವಕ ಪ್ರತಿಕ್ರಿಯಿಸುತ್ತಾ 'ಜಾರತಿ, ಧರ್ಮವನ್ನು ಬದಿಗೊತ್ತಿ ಇಡೀ ಗ್ರಾಮದ ಎಲ್ಲಾ ಸಮುದಾಯದ ಯುವಕರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ನಮ್ಮ ಬಳಿ 10 ಟ್ರ್ಯಾಕ್ಟರ್, 2 ಜೆಸಿಬಿ ಹಾಗೂ ಪೊರಕೆ, ಮೊದಲಾದ ಸ್ವಚ್ಛತೆಗೆ ಬಳಕೆಯಾಗುವ ಸಾಧನಗಳಿದ್ದವು. ಮಾರ್ಗುಬಾಯಿ, ಗ್ರಾಮ ದೇವತೆಯ ದೇವಸ್ಥಾನವಾಗಿದೆ. ಹೀಗಾಗಿ ಎಲ್ಲಕ್ಕಿಂತ ಮೊದಲು ದೇವಸ್ಥಾನದ ಆವರಣವನ್ನು ಶುಚಿಗೊಳಿಸಲು ನಿರ್ಧರಿಸಿದೆವು. ಇಷ್ಟೇ ಅಲ್ಲದೇ ಇಲ್ಲಿನ ಬುದ್ಧ ವಿಹಾರ, ಮಕ್ತಂ ದರ್ಗಾ, ಮಹಾದೇವ ಮಂದಿರ ಹಾಗೂ ಸಿಖಂದರ್ ದರ್ಗಾವನ್ನು ಸ್ವಚ್ಛಗೊಳಿಸಲಾಗಿದೆ' ಎಂದಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಸ್ಥಳೀಯ ಅತುಲ್ ಅಂಬಿ ಪ್ರತಿಕ್ರಿಯಿಸುತ್ತಾ 'ದೇವಸ್ಥಾನದ ಆವರಣ, ಇಲ್ಲಿನ ರಸ್ತೆ ಶುಚಿಗೊಳಿಸಿದ ಬಳಿಕ, ಮಸೀದಿ ಸ್ವಚ್ಛಗೊಳಿಸುತ್ತಿದ್ದ ಮೌಲ್ವಿಗಳು ಇಲ್ಲಿಗೆ ಆಗಮಿಸಿ ದೇವಸ್ಥಾನದ ಒಳ ಭಾಗವನ್ನು ಶುಚಿಗೊಳಿಸಲು ಆರಂಭಿಸಿದ್ದಾರೆ. ಎಲ್ಲಕ್ಕೂ ಮೊದಲು ದೇವರ ವಿಗ್ರಹವನ್ನು ತೊಳೆದು ಸ್ವಚ್ಛಗೊಳಿಸಿದ ಅವರು, ಹಿಂದೂ ಸಂಪ್ರದಾಯದಂತೆ ಸೀರೆಯಿಂದ ಅಲಂಕರಿಸಿದ್ದಾರೆ' ಎಂದಿದ್ದಾರೆ. 

ನೇಕಾರ ಗೌಸ್ ಜಮಾದಾರ್ ಈ ಸ್ವಚ್ಛತಾ ಅಭಿಯಾನವನ್ನು ವಿವರಿಸುತ್ತಾ 'ನಿನ್ನೆಯ ಘಟನೆ ಹರಿದ ಬಟ್ಟೆಯನ್ನು ಮತ್ತೆ ನೇಯಬಹುದು ಹಾಗೂ ಇದನ್ನು ಮರು ವಿನ್ಯಾಸಗೊಳಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ' ಎಂದಿದ್ದಾರೆ.