ಬಕ್ರೀದ್ ವೇಳೆ ನಡೆಯುತ್ತೆ 2 ವಧೆ: ಮುಸ್ಲಿಂ ಧರ್ಮಗುರು

Muslim Leader Controversy Statement
Highlights

 

 ರಂಜಾನ್‌ ಪ್ರಾರ್ಥನೆ ವೇಳೆ ಶನಿವಾರ ಮೌಲ್ವಿಯೊಬ್ಬರು (ಮುಸ್ಲಿಂ ಧರ್ಮಗುರು) ಪ್ರಚೋದನಕಾರಿ ಭಾಷಣ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ವಿಜಯಪುರ :  ರಂಜಾನ್‌ ಪ್ರಾರ್ಥನೆ ವೇಳೆ ಶನಿವಾರ ಮೌಲ್ವಿಯೊಬ್ಬರು (ಮುಸ್ಲಿಂ ಧರ್ಮಗುರು) ಪ್ರಚೋದನಕಾರಿ ಭಾಷಣ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. 2 ತಿಂಗಳೊಳಗೆ ಬಕ್ರೀದ್‌ ಹಬ್ಬವಿದೆ. ಈ ವೇಳೆ ಸೈತಾನ್‌ ಮತ್ತೆ ತೊಂದರೆ ಕೊಡುವ ಸಾಧ್ಯತೆಯಿದೆ. ಒಂದೊಮ್ಮೆ ಆ ರೀತಿಯಾದರೆ ಒಂದಲ್ಲ ಎರಡು ಕುರ್ಬಾನಿ (ಪ್ರಾಣಿ ಬಲಿ) ಮಾಡಬೇಕಾಗುತ್ತದೆ ಎಂದಿದ್ದಾರೆ. ಸಚಿವ ಶಿವಾನಂದ ಪಾಟೀಲ್‌ ಎದುರೇ ಈ ರೀತಿ ಹೇಳಿಕೆ ನೀಡಿದ್ದು, ಅವರು ಮೌನವಾಗಿ ಕುಳಿತಿದ್ದೂ ಕೂಡ ವಿವಾದಕ್ಕೆ ಕಾರಣವಾಗಿದೆ.

ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತ್ತೀಚೆಗೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದರು. ಹಾಗಾಗಿ, ಅವರನ್ನುದ್ದೇಶಿಸಿಯೇ ಮೌಲ್ವಿ ಮಾತನಾಡಿದ್ದು ಎಂದು ಚರ್ಚೆಯಾಗುತ್ತಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಮೌಲ್ವಿ, ತಾವು ಶಾಸಕರನ್ನು ಉದ್ದೇಶಿಸಿ ಹೇಳಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ಕುರ್ಬಾನಿ ಜತೆ ಮತ್ತೊಂದು ಕುರ್ಬಾನಿ: ತಿಂಗಳೊಳಗೆ ಬಕ್ರೀದ್‌ ಹಬ್ಬ ಬರುತ್ತದೆ. ಆ ವೇಳೆ ಸೈತಾನ್‌ ಮತ್ತೆ ತೊಂದರೆ ಕೊಡುವ ಸಾಧ್ಯತೆಗಳಿವೆ. ಒಂದೊಮ್ಮೆ ಆ ರೀತಿಯಾದರೆ ಕುರ್ಬಾನಿ ಜತಗೆ ಮತ್ತೊಂದು ಕುರ್ಬಾನಿ ಮಾಡಬೇಕಾಗುತ್ತದೆ ಎಂದು ಇಲ್ಲಿನ ಧರ್ಮಗುರು ಹಜರತ್‌ ಸೈಯ್ಯದ್‌ ತನ್ವೀರ ಪೀರಾ ಹಾಶ್ಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮತ್ತೊಂದು ಆಘಾತಕಾರಿ ಅಂಶ ಎಂದರೆ ಮೌಲ್ವಿ ಈ ಹೇಳಿಕೆ ನೀಡುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಸಹ ಅಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಸೈತಾನ್‌ನಿಂದ ಮತ್ತೆ ತೊಂದರೆ:

ಸೈತಾನ ಈಗ ಜಾಗೃತನಾಗಿದ್ದಾನೆ. ಬಕ್ರೀದ್‌ ಹಬ್ಬದ ಸಂದರ್ಭದಲ್ಲಿಯೂ ಆತ ತೊಂದರೆ ಕೊಡುವ ಸಾಧ್ಯತೆ ಇದೆ. ಈಗಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೈತಾನನ ಉಪಟಳ ನಿಯಂತ್ರಿಸಬೇಕು. ಇಲ್ಲವಾದಲ್ಲಿ ಬಕ್ರೀದ್‌ ಸಂದರ್ಭದಲ್ಲಿ ಒಂದಲ್ಲ ಎರಡು ಕುರ್ಬಾನಿ ನೀಡಬೇಕಾಗುತ್ತದೆ ಎಂದಿದ್ದಾರೆ.

ಯತ್ನಾಳರನ್ನು ಉದ್ದೇಶಿಸಿ ಮಾತನಾಡಿಲ್ಲ:  ಮುಸ್ಲಿಂ ಧರ್ಮಗುರುಗಳು ಶಾಸಕ ಬಸವರಾಜ ಯತ್ನಾಳರನ್ನೇ ಉದ್ದೇಶಿಸಿ ಈ ಎಚ್ಚರಿಕೆ ನೀಡಿದ್ದಾರೆ. ಅವರನ್ನೇ ಬಲಿ ಕೊಡುತ್ತೇವೆ ಎಂದಿದ್ದಾರೆ ಪುಕಾರು ಹೆಚ್ಚಾಗುತ್ತಿದ್ದಂತೆ, ನಾನು ಶಾಸಕರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿಲ್ಲ ಎಂದು ಮುಸ್ಲಿಂ ಧರ್ಮಗುರುಗಳು ಸ್ಪಷ್ಟನೆ ನೀಡಿದ್ದಾರೆ.

ಯಾರು ಸಮಾಜದ ಶಾಂತಿ ಕದಡುವರೋ, ಯಾರು ತಪ್ಪು ಕೆಲಸ ಮಾಡುವರೋ ಅಂಥವರಿಗೆ ಸೈತಾನ್‌ ಎಂದು ಕರೆಯುತ್ತೇವೆ. ಅಂತಹ ಸೈತಾನ್‌ ಯಾವುದೇ ಸಮುದಾಯಕ್ಕೆ ಸೇರಿದವರಿರಬಹುದು. ಅಂಥವರಿಗೆ ಸೈತಾನ್‌ ಎಂದು ಕರೆದಿದ್ದೇನೆ. ಆದರೆ ತಾನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಗ್ಗೆ ಮಾತನಾಡಿಲ್ಲ. ಅವರ ಹೆಸರು ಪ್ರಸ್ತಾಪಿಸಿಲ್ಲ ಎಂದು ನಗರದ ಹಾಸೀಂಪೀರ ದರ್ಗಾದ ಧರ್ಮಗುರು ತನ್ವೀರಪೀರಾ ಹಾಶ್ಮಿ ಸ್ಪಷ್ಟಪಡಿಸಿದ್ದಾರೆ.

ಹಿಂದು-ಮುಸ್ಲಿಂ ಸಾಮರಸ್ಯವನ್ನು ಹಾಳು ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಎರಡು ತಿಂಗಳಲ್ಲಿ ಬಕ್ರೀದ್‌ ಹಬ್ಬ ಬರುತ್ತದೆ. ಹಬ್ಬವನ್ನು ಶಾಂತಿ, ಪ್ರೀತಿಯಿಂದ ಆಚರಿಸಬೇಕಿದೆ. ಅದನ್ನು ಹಾಳು ಮಾಡುವವರಿಗೆ ಯಶಸ್ಸು ಸಿಗಬಾರದೆಂದು ಹೇಳಿದ್ದೇನೆ ಎಂದರು.

2 ತಿಂಗಳಲ್ಲಿ ಬಕ್ರೀದ್‌ ಹಬ್ಬವಿದೆ. ಆಗ ನಾವು ಗೋವು ಬಲಿ ಕೊಡುತ್ತೇವೆ. ಆ ಸಂದರ್ಭದಲ್ಲಿ ಸೈತಾನ ಮತ್ತೆ ಉಪಟಳ ಕೊಡುವ ಸಾಧ್ಯತೆ ಇದೆ. ಆ ರೀತಿಯಾದರೆ ಒಂದಲ್ಲ, ಎರಡು ಕುರ್ಬಾನಿ (ವಧೆ) ಆಗಬೇಕಾಗುತ್ತದೆ.

- ತನ್ವೀರ್‌ ಪೀರಾ ಹಾಶ್ಮಿ, ಧರ್ಮಗುರು

loader