ಬೆಂಗಳೂರು, [ಜೂನ್.05]: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಸ್ವತಃ ಕರ್ನಾಟಕ ಬಿಜೆಪಿ ಉಸ್ತುವಾರಿಗಳೇ ಅಖಾಡಕ್ಕಿಳಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿವೆ. ಈ ಪ್ರಶ್ನೆ ಉದ್ಭವಿಸಲು ಕಾರಣವೂ ಸಹ ಇದೆ. ಅದು ಈ ಕೆಳಗಿನಂತಿದೆ.

ದೇಶ ಸೇವೆ ಮಾಡುವ ಮನಸ್ಸಿದ್ದರೆ ಕಾಂಗ್ರೆಸ್‌ನ ಶಾಸಕರು ಬಿಜೆಪಿಗೆ ಬನ್ನಿ. ಬಿಜಿಪಿಗೆ ಬಂದರೆ ಶೇ. 100ರಷ್ಟು ಫಲಿತಾಂಶ ಪಕ್ಕಾ ಆಗಿರುತ್ತದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಕಾಂಗ್ರೆಸ್‌ ಶಾಸಕರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

ಇಂದು [ಬುಧವಾರ] ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಅಭಿನಂದನಾ ಕಾರ್ಯಕ್ರಮದ ಭಾಷಣ ವೇಳೆ ಮಾತನಾಡಿದ ಅವರು, ‘ಕೈ’ ಶಾಸಕರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬನ್ನಿ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರೆ ಏನಾಗುತ್ತಾರೆ ಎಂಬುದಕ್ಕೆ ಉಮೇಶ್ ಜಾಧವ್ ಉದಾಹರಣೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೈತ್ರಿ ಸರ್ಕಾರವನ್ನು ಉರುಳಿಸಬೇಕು ಎನ್ನುವ ಅರ್ಥದಲ್ಲಿ ಹೇಳಿದರು. 

 ಶೇ.100ರಷ್ಟು ಫಲಿತಾಂಶ ಪಕ್ಕಾ ದೇಶದ ಕೆಲಸ ಮಾಡುವ ಆಸೆ ಇದ್ದರೆ ಬಿಜೆಪಿಗೆ ಆಗಮಿಸಿ ಎಂದು ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಆಹ್ವಾನಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರ ಈ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದರೆ ಹೇಗಾದರೂ ಮಾಡಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಮಾಡಲು ಪಣತೊಟ್ಟಂತಿದೆ. 

ಪಕ್ಷಕ್ಕೆ ಬನ್ನಿ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಈ ಮಾತುಗಳನ್ನು ಗಮನಿಸಿದರೆ ರಾಜ್ಯ ಬಿಜೆಪಿ ಉಸ್ತುವಾರಿಗಳೇ ಆಪರೇಷನ್ ಕಮಲಕ್ಕೆ ನಿಂತ್ರಾ ಎನ್ನುವ ಪ್ರಶ್ನೆಗಳು ಸಹ ಸಹಜವಾಗಿ ಹುಟ್ಟಿಕೊಂಡಿವೆ.