ಬೆಂಗಳೂರು :  ಅತೃಪ್ತ ಶಾಸಕರ ಬೇಗುದಿ ಶಮನಕ್ಕೆ ಸೂತ್ರ ರೂಪಿಸುವ ದಿಸೆಯಲ್ಲಿ ಮೈತ್ರಿಕೂಟದ ನಾಯಕರು ವ್ಯಸ್ತರಾಗಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಹೊಸ ರೀತಿಯ ಅತೃಪ್ತಿ ಶುರುವಾಗಿದೆ. ಅದು ನಿಷ್ಠರ ಅತೃಪ್ತಿ!

ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟನಿವಾರಿಸಲು ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೈತ್ರಿಕೂಟದ ನಾಯಕರ ಚಿಂತನೆಯು ಕಾಂಗ್ರೆಸ್‌ ನಿಷ್ಠರಲ್ಲಿ ಬೇಗುದಿ ಹುಟ್ಟುಹಾಕಿದೆ. ಅತೃಪ್ತಿ ಹೊಂದುವುದೇ ಸಚಿವ ಸ್ಥಾನ ಪಡೆಯಲು ಅರ್ಹತೆ ಎನ್ನುವಂತಾಗಿದೆ. ಪಕ್ಷ ನಿಷ್ಠೆಗೆ ಯಾವುದೇ ಬೆಲೆ ಇಲ್ಲ ಎಂಬ ವಾತಾವರಣವಿದ್ದರೆ, ನಮಗೂ ಅತೃಪ್ತಿಯಿದೆ ಎನ್ನುವ ಮೂಲಕ ಇದುವರೆಗೂ ನಿಷ್ಠಾವಂತರಾಗಿದ್ದ ಹಲವು ಕಾಂಗ್ರೆಸ್‌ ಶಾಸಕರು ಅತೃಪ್ತಿ ಹೊರಹಾಕತೊಡಗಿದ್ದಾರೆ.

ಈ ಪೈಕಿ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್‌ ಅವರ ಪುತ್ರ, ಜೇವರ್ಗಿ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಡಾ.ಅಜಯ ಸಿಂಗ್‌ ಪ್ರಮುಖರು. ಮಂಗಳವಾರ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಅವರು, ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ನೇರವಾಗಿಯೇ ಹೇಳಿದ್ದಾರೆ. ಅಲ್ಲದೆ, ಅತೃಪ್ತ ಶಾಸಕರಿಗೆ ಮಾತ್ರ ಪ್ರಾತಿನಿಧ್ಯ ನೀಡುತ್ತಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇವರಲ್ಲದೆ, ಶಿಡ್ಲಘಟ್ಟದ ವಿ. ಮುನಿಯಪ್ಪ, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್‌ ಅವರು ದನಿಗೂಡಿಸಿದ್ದು, ತಮಗೂ ಸಚಿವ ಸ್ಥಾನ ಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಜಯ ಸಿಂಗ್‌ ಅವರು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನಗೆ ಒಂದು ಅವಕಾಶ ಕಲ್ಪಿಸಿಕೊಡುವಂತೆ ಹಿರಿಯ ನಾಯಕರಿಗೆ ಮನವಿ ಮಾಡಿದ್ದೇನೆ. ಕಲಬುರ್ಗಿ ಜಿಲ್ಲೆ ದೊಡ್ಡದು. ಈ ಹಿಂದೆ ಇಬ್ಬರು, ಮೂವರು ಸಚಿವರನ್ನು ನೇಮಕ ಮಾಡಿದ ಉದಾಹರಣೆಗಳೂ ಇವೆ. ಹೀಗಾಗಿ ಹಾಲಿ ಸಚಿವರನ್ನು ತೆಗೆಯದೆ ಮತ್ತೊಂದು ಸಚಿವ ಸ್ಥಾನ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ನಾಯಕರ ಚಿಂತನೆಗೆ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿದ ಅವರು, ಪಕ್ಷವು ನಿಷ್ಠರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ನೀಡದಿದ್ದರೂ ಪಕ್ಷದ ಶಿಸ್ತಿನ ಸಿಪಾಯಿಯಂತೆಯೇ ಮುಂದುವರೆಯುತ್ತೇನೆ. ಆದರೆ, ನನಗೂ ಅರ್ಹತೆಯಿದೆ. ಹೀಗಾಗಿ ಸಚಿವ ಸ್ಥಾನ ನೀಡುವಂತೆ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದೇನೆ ಎಂದರು.

ನನಗೆ ಸಚಿವ ಸ್ಥಾನ ನೀಡಲು ಹಾಲಿ ಸಚಿವರೊಬ್ಬರನ್ನು ಸಂಪುಟದಿಂದ ಕೈಬಿಡಬೇಕು ಎಂದು ನಾನು ಒತ್ತಾಯಿಸುವುದಿಲ್ಲ. ಕಲಬುರಗಿ ಜಿಲ್ಲೆಯಿಂದ ಸಚಿವರಾಗಿರುವ ಪ್ರಿಯಾಂಕ ಖರ್ಗೆ ಸಚಿವ ಸ್ಥಾನ ಕಸಿದುಕೊಂಡು ನನಗೆ ಕೊಡುವುದು ಬೇಡ. ಜಿಲ್ಲೆಗೆ ಇಬ್ಬರು ಸಚಿವ ಸ್ಥಾನ ನೀಡಲು ಅವಕಾಶವಿದೆ ಎಂದರು.

ನಮ್ಮ ತಂದೆ ಧರ್ಮಸಿಂಗ್‌ 50 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲೇ ಕೆಲಸ ಮಾಡಿ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿಸಿದ್ದವರು. ನಾನು ಕೂಡ 20 ವರ್ಷದಿಂದ ಪಕ್ಷದಲ್ಲಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಬುಧವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ವೇಳೆ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಹೇಳಿದರು.

ಹಿರಿತನಕ್ಕೆ ಮಾನ್ಯತೆ ನೀಡಲಿ-ಮುನಿಯಪ್ಪ:

ತಮ್ಮ ಹಿರಿತನ ಹಾಗೂ ಅನುಭವಕ್ಕೆ ಮಾನ್ಯತೆ ನೀಡಿ ಸಚಿವ ಸ್ಥಾನ ಕೊಡಬೇಕು ಎಂದು ಶಿಡ್ಲಘಟ್ಟಶಾಸಕ ವಿ. ಮುನಿಯಪ್ಪ ನೇರಾನೇರ ಆಗ್ರಹ ಮಾಡಿದ್ದಾರೆ. ಅಷ್ಟೇ ಅಲ್ಲ, ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ನೇರವಾಗಿ ಒತ್ತಾಯಿಸಿದ್ದಾರೆ.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ನಾನು ಅರ್ಹ. ಕಾಂಗ್ರೆಸ್‌ ಪಕ್ಷದಲ್ಲಿ ಹಿರಿಯನಾಗಿದ್ದು, ಅನುಭವವೂ ಇದೆ. ಹೀಗಾಗಿ ಹಿರಿತನ ಆಧರಿಸಿ ಸಚಿವ ಸ್ಥಾನ ನೀಡಬೇಕು. ಈ ವಿಚಾರವಾಗಿ ಕಾಂಗ್ರೆಸ್‌ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.

ಆದರೆ, ಸಚಿವ ಸ್ಥಾನಕ್ಕೆ ಬೇಡಿಕೆಯಿಡಲು ತಾವು ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ ಅವರು, ಮುಖ್ಯಮಂತ್ರಿಯವರೊಂದಿಗೆ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತ್ರ ಚರ್ಚೆ ನಡೆಸಿದ್ದೇನೆ ಎಂದರು.

ಇದೇ ರೀತಿ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್‌ ಕೂಡ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಎಲ್ಲಿಯವರೆಗೂ ಶಾಸಕರಾಗಿಯೇ ತಾವು ಮುಂದುವರೆಯಬೇಕು? ಅರ್ಹತೆ ಹಿನ್ನೆಲೆಯಲ್ಲಿ ತಮಗೂ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪಕ್ಷೇತರ ನಾಗೇಶ್‌ ಒತ್ತಾಯ:

ಇದೇ ವೇಳೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಮತ್ತೊಮ್ಮೆ ಬೆಂಬಲ ಸೂಚಿಸಿರುವ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್‌, ತಮಗೆ ಸ್ಥಾನ ನೀಡಲೇ ಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಸರ್ಕಾರದ ಆರಂಭದಲ್ಲಿ ಬೆಂಬಲ ಕೊಟ್ಟಿದ್ದೆ. ಪಕ್ಷೇತರರಾಗಿದ್ದ ಇಬ್ಬರ ಪೈಕಿ ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ನನಗೆ ಅವಕಾಶ ನೀಡಿರಲಿಲ್ಲ. ನಮ್ಮ ಬೆಂಬಲ ಪಡೆದ ಮೇಲೆ ನಮಗೂ ಅವಕಾಶ ನೀಡುವುದು ನ್ಯಾಯಸಮ್ಮತವಾಗಿದ್ದು, ಅದನ್ನು ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.

ನನಗೆ ಸಚಿವ ಸ್ಥಾನ ಬೇಕು. ನಿಗಮ-ಮಂಡಳಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಚಿವ ಸ್ಥಾನ ಕೊಟ್ಟರೆ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಮುಂದುವರಿಸುತ್ತೇನೆ. ಈ ಬಾರಿ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಅವಕಾಶ ತಪ್ಪಿದರೆ ಮುಂದೇನು ಮಾಡಬೇಕು ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.