ಇಸ್ಲಾಮಾಬಾದ್(ಜು.17): ಅತ್ತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರರಣದ ತೀರ್ಪು ಇಂದು ಹೊರಬೀಳಲಿದೆ. ಇತ್ತ ಭಯೋತ್ಪಾದನೆ ವಿರುದ್ಧ ತಾನೆಷ್ಟು ಕಠಿಣ ನಿಲುವು ಹೊಂದಿದ್ದೇನೆ ಎಂದು ತೋರಿಸಲು ಪಾಕಿಸ್ತಾನ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ನನ್ನು ಬಂಧಿಸುವ ನಾಟಕವಾಡಿದಂತಿದೆ.

ಹೌದು, ಮುಂಬೈ ಉಗ್ರ ದಾಳಿ ರೂವಾರಿ ಮತ್ತು ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ನನ್ನು ಪಾಕಿಸ್ತಾನ'ಸರ್ಕಾರ ಬಂಧಿಸಿದೆ. ಎಲ್‌ಇಟಿ ವಿರುದ್ಧ ದಾಖಲಾಗಿರುವ ಸುಮಾರು 23 ಉಗ್ರ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಇಂದು ಸಯ್ಯೀದ್ ಮನೆಗೆ ಏಕಾಏಕಿ ದಾಳಿ ಮಾಡಿದ ಅಧಿಕಾರಿಗಳು ಆತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದರು ಎಂದು ಖುದ್ದು ಜಮಾತ್-ಉದ್-ದಾವಾ ವಕ್ತಾರ ಮಾಹಿತಿ ನೀಡಿದ್ದಾನೆ.

ಈ ನಡುವೆ ಉಗ್ರ ಮಸೂದ್ ಮತ್ತು ಬಾಲಾಕೋಟ್ ಉಗ್ರ ಕ್ಯಾಂಪ್ ಸೇರಿದಂತೆ ಆತನ ಉಗ್ರ ಚಟುವಟಿಕೆಗಳ ಕುರಿತ ಡಾಸಿಯರ್ ಒಂದನ್ನು ಭಾರತ ಸರ್ಕಾರ ಸಿದ್ಧ ಪಡಿಸಿದ್ದು, ಈ ಡಾಸಿಯರ್ ಅನ್ನು ಪಾಕ್ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.