ಭೋಪಾಲ್‌[ಜ.11]: ಝೂಗಳಲ್ಲಿ ಬಂಧಿಯಾಗಿರುವ ಹುಲಿಗಳನ್ನು ನೋಡಿದರೇ ಮೈ ಜುಮ್ಮೆನ್ನುತ್ತದೆ. ಅಂಥದ್ದರಲ್ಲಿ ಕಾಡಿಗೆ ಹೋದಾಗ ಕಣ್ಣೆದುರೇ ಬಂದ ಹುಲಿಯನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಒಂದೂವರೆ ಗಂಟೆಗಳ ಕಾಲ ದಿಟ್ಟಿಸಿ ನೋಡುತ್ತಾ, ಹುಲಿಯನ್ನೇ ಹೆದರಿಸಿ ಓಡಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶ ಸಾತ್ಪುರ ಹುಲಿ ರಕ್ಷಿತಾರಣ್ಯದಲ್ಲಿ ನಡೆದಿದೆ.

ಇತ್ತೀಚೆಗೆ ಹುಲಿ ಗಣತಿಗೆಂದು ಮಹಿಳಾ ಅರಣ್ಯಾಧಿಕಾರಿಯೊಬ್ಬರು, ಇಬ್ಬರು ಪುರುಷ ಗಾರ್ಡ್‌ಗಳ ಜೊತೆ ಕಾಡಿಗೆ ಹೋಗಿದ್ದರು. ಈ ವೇಳೆ ಹುಲಿಯೊಂದು ಏಕಾಏಕಿ ಪೊದೆಯೊಳಗಿಂದ ಪ್ರತ್ಯಕ್ಷವಾಗಿ, ಗಣತಿಗೆಂದು ಬಂದಿದ್ದವರ ಮುಂದೆ ಘರ್ಜಿಸಲು ಆರಂಭಿಸಿತು. ಈ ವೇಳೆ ಅಧಿಕಾರಿಗಳು ಮತ್ತು ಹುಲಿಯ ನಡುವೆ ಕೇವಲ 10 ಮೀಟರ್‌ ಅಂತರವಿತ್ತು. ಹುಲಿಯ ಘರ್ಜನೆ ಕೇಳಿದ್ದೇ ತಡ ಇಬ್ಬರೂ ಪುರುಷ ಗಾರ್ಡ್‌ಗಳು ತತ್ತರಿಸಿ ಹೋಗಿದ್ದರು. ಆದರೆ ಈ ಹಂತದಲ್ಲಿ ಅಪೂರ್ವ ಧೈರ್ಯ ಪ್ರದರ್ಶಿಶಿದ ಮಹಿಳಾ ಅಧಿಕಾರಿ, ತಕ್ಷಣವೇ ನಿಂತ ಜಾಗದಿಂದ ಸ್ವಲ್ಪವೂ ಅಲುಗಾಡಬೇಡಿ ಎಂದು ಇಬ್ಬರಿಗೂ ಸೂಚಿಸಿದರು.

ಜೊತೆಗೆ ತಾವು ನಿಂತ ಸ್ಥಳದಲ್ಲೇ ನಿಂತು ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದರು. ಪುರುಷ ಗಾರ್ಡ್‌ಗಳಿಗೂ ಅದೇ ರೀತಿ ಸೂಚಿಸಿದರು. ಇದೇ ರೀತಿ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಕೆಲಸ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು. ಈ ಘಟನೆಯಿಂದ ಬೆಚ್ಚಿದ ಹುಲಿ, ಒಂದೂವರೆ ಗಂಟೆಗಳ ಬಳಿಕ ಸುಮ್ಮನೆ, ಮತ್ತೆ ಕಾಡಿನೊಳಗೆ ಸೇರಿಕೊಂಡಿತು.

ಮಹಿಳಾ ಅಧಿಕಾರಿಯ ಈ ಧೈರ್ಯ ಆಕೆಯ ಜೀವವನ್ನು ಕಾಪಾಡುವುದರ ಜೊತೆಗೆ ಇಬ್ಬರೂ ಅಧಿಕಾರಿಗಳ ಜೀವವನ್ನೂ ಕಾಪಾಡಿದೆ. ಮಹಿಳಾ ಅಧಿಕಾರಿಯ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.