ಬೆಂಗಳೂರು  [ಜು.22]:  ‘ಒಂದು ದೇಶ-ಒಂದು ಚುನಾವಣೆ’ ಪರಿಕಲ್ಪನೆಯಡಿ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕಾದರೆ ಇಂತಹ ವ್ಯವಸ್ಥೆಗೆ ಇರುವ ಮಿತಿ, ಲೋಪದೋಷಗಳ ಬಗ್ಗೆ ಮತ್ತಷ್ಟುಅಧ್ಯಯನ, ಚಿಂತನೆಗಳು ನಡೆಯಬೇಕಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ ಭಾನುವಾರ ಆಯೋಜಿಸಿದ್ದ ‘ಒಂದು ದೇಶ-ಒಂದು ಚುನಾವಣೆ’ ವಿಷಯ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಒಂದು ದೇಶ-ಒಂದು ಚುನಾವಣೆ’ ಪರಿಕಲ್ಪನೆಯಡಿಯಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಕಾನೂನು ಆಯೋಗ 1999ರಲ್ಲಿ ವರದಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ನೀತಿ ಆಯೋಗ ರೂಪುರೇಷ ಸಿದ್ಧಪಡಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಒಳಗೆ ಹಾಗೂ ಹೊರಗೆ ಈ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದು, ವಿರೋಧ ಪಕ್ಷಗಳು ಸೂಕ್ತವಾಗಿ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.

ಒಂದು ದೇಶ- ಒಂದು ಚುನಾವಣೆಯಿಂದ ಸ್ಥಿರ ಸರ್ಕಾರಗಳು ಬರುವ ಸಾಧ್ಯತೆಯಿದೆ. ಆದರೆ, ಈ ಕುರಿತ ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ. ಇಂತಹ ವ್ಯವಸ್ಥೆ ಜಾರಿಗೆ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟುಸುಧಾರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ರಾಜೀವ್‌ ಗೌಡ ಮಾತನಾಡಿ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಸನ್ನಿವೇಶ ವಿಭಿನ್ನವಾಗಿರುತ್ತದೆ. ವಿಧಾನಸಭೆಯ ಚುನಾವಣೆ ವೇಳೆ ರಾಜ್ಯ ರಾಜಕೀಯವನ್ನು ಮತ್ತು ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶವನ್ನು ಗಮನದಟ್ಟುಕೊಂಡು ಮತದಾರ ಮತ ಚಲಾಯಿಸುತ್ತಾನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ, ಸ್ಥಳೀಯ ಸಮಸ್ಯೆಗಳು ಮತ್ತು ಅವುಗಳ ಪರಿಹಾರವನ್ನು ಆಧರಿಸಿ ಮತದಾರ ತನ್ನ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾನೆ. ಹೀಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಹಾಗೂ ವಿಧಾನಸಭೆಗೆ ಪ್ರತ್ಯೇಕ ಚುನಾವಣೆ ನಡೆಯುವುದೇ ಸೂಕ್ತ ಎಂದು ತಿಳಿಸಿದರು.

ಹಿರಿಯ ವಕೀಲ ಆದಿತ್ಯ ಸೋಂಧಿ ಮಾತನಾಡಿ, ‘ಒಂದು ದೇಶ-ಒಂದು ಚುನಾವಣೆ’ ಎಂಬುದು ಉತ್ತಮ ಪರಿಕಲ್ಪನೆ ಕಲ್ಪನೆಯಾಗಿರಬಹುದು. ಆದರೆ, ಆ ವ್ಯವಸ್ಥೆಯ ಜಾರಿಗೆ ಎಲ್ಲ ರಾಜಕೀಯ ಪಕ್ಷಗಳು ಮತದಾರರು ಹಾಗೂ ಸಾರ್ವಜನಿಕರು ವಿಸ್ತೃತವಾಗಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ, ಚುನಾವಣೆ ಪ್ರಕ್ರಿಯೆಯಲ್ಲಿಯೂ ಚುನಾವಣಾ ಆಯೋಗವು ಸುಧಾರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಮಾಳವಿಕಾ ಪ್ರಸಾದ್‌ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ಚುನಾವಣಾ ಖರ್ಚು ನಿಯಂತ್ರಣ ಮಾಡಬಹುದು. ಆದರೆ, ಎಷ್ಟುಹಣ ಕಡಿಮೆಯಾಗುತ್ತದೆ? ಉಳಿತಾಯವಾಗಲಿದೆ? ಎಂಬುದರ ಬಗ್ಗೆ ನಿಖರವಾಗಿ ತಿಳಿಯಬೇಕಿದೆ. ಏಕ ಕಾಲದಲ್ಲಿ ಚುನಾವಣೆಯಿಂದಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಸ್ಥಿರವಾಗಿರುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯು ಸದ್ಯ ದೇಶದಲ್ಲಿ ಅತಿದೊಡ್ಡ ಪಕ್ಷವಾಗಿರುವುದರಿಂದ ಮೋದಿ ಅವರು ಒಂದು ದೇಶ-ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಚುನಾವಣೆಯಿಂದ ದೇಶದಲ್ಲಿ ಬಿಜೆಪಿ ತನ್ನ ಬಲ ಮತ್ತಷ್ಟುಹೆಚ್ಚಿಸಿಕೊಳ್ಳಬಹುದು ಎಂದು ತಪ್ಪಾಗಿ ಅರ್ಥೈಸಿ ಹೇಳಲಾಗುತ್ತಿದೆ.

-ತೇಜಸ್ವಿ ಸೂರ‍್ಯ, ಸಂಸದ