ನವದೆಹಲಿ(ಅ.28): ತಮ್ಮ ವಾಹನದ ಮೇಲೆ ಸೇನಾ ಧ್ವಜ ಹಾಕಿದ್ದಲ್ಲದೇ ಇದನ್ನು ಪ್ರಶ್ನಿಸಿದ ನಿವೃತ್ತ ಸೇನಾ ಅಧಿಕಾರಿಗಳಿಗೆ ಅವಮಾನಿಸಿದ ರಕ್ಷಣಾ ಇಲಾಖೆ ವಕ್ತಾರರನ್ನು ರಜೆ ಮೇಲೆ ಕಳುಹಿಸಲಾಗಿದೆ.

ರಕ್ಷಣಾ ಇಲಾಖೆ ವಕ್ತಾರೆ ಸ್ವರ್ಣಶ್ರೀ ರಾವ್ ರಾಜಶೇಖರ್ ತಮ್ಮ ಕಾರಿನ ಮೇಲೆ ಭಾರತೀಯ ಸೇನಾ ಧ್ವಜವನ್ನು ಅಳವಡಿಸಿದ್ದರು. ಇದನ್ನು ಪ್ರಶ್ನಿಸಿ ನೌಕಾಸೇನೆಯ ನಿವೃತ್ತ ಮುಖ್ಯಸ್ಥ ಅರುಣ್ ಪ್ರಕಾಶ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗೆ ಖಾರವಾಗಿ ಪ್ರಶ್ನಿಸಿದ್ದ ಸ್ವರ್ಣಶ್ರೀ, ನೀವು ನೌಕಾಸೇನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಿಮಗೆ ಉಚಿತವಾಗಿ ಕಾರು, ಮಕ್ಕಳನ್ನು ಶಾಲೆಗೆ ಕಳುಹಿಸಲು ಅದನ್ನು ಬಳಸಿದ್ದು ಮತ್ತು ಪತ್ನಿ ಅದರಲ್ಲಿಯೇ ಶಾಪಿಂಗ್ ಮಾಡಿದ್ದನ್ನು ಪ್ರಶ್ನಿಸಿದರೆ ಹೇಗೆ ಎಂದು ಟ್ವೀಟ್ ಮಾಡಿ ಅವಮಾನಿಸಿದ್ದರು.

ಯುದ್ಧವೀರ ಅರುಣ್ ಪ್ರಕಾಶ್ ಅವರಿಗೆ ಮಾಡಿದ ಅವಮಾನ ಕಂಡು ಕೆಂಡಾಮಂಡಲವಾಗಿದ್ದ ಹಿರಿಯ ಮತ್ತು ನಿವೃತ್ತ ಸೇನಾ ಅಧಿಕಾರಿಗಳು, ಇದು ಭಾರತೀಯ ಯೋಧರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದರು.

ಸ್ವರ್ಣಶ್ರೀ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೇ ಎಚ್ಚೆತ್ತ ರಕ್ಷಣಾ ಇಲಾಖೆ, ಕೂಡಲೇ ಜಾರಿಗೆ ಬರುವಂತೆ ಸ್ವರ್ಣಶ್ರೀ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ಅಲ್ಲದೇ ಸ್ವರ್ಣಶ್ರೀ ಜಾಗಕ್ಕೆ ಕರ್ನಲ್ ಅಮಾನ್ ಅವರನ್ನು ರಕ್ಷಣಾ ಇಲಾಖೆ ವಕ್ತಾರರನ್ನಾಗಿ ನೇಮಿಸಿದೆ.

ಇನ್ನು ನಿವೃತ್ತ ಸೇನಾ ಅಧಿಕಾರಿಗಳಿಗೆ ಸ್ವರ್ಣಶ್ರೀ ಮಾಡಿದ ಅವಮಾನಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್ ಯುದ್ಧಭುಮಿಯಲ್ಲಿ ಸಮವಸ್ತ್ರದಲ್ಲಿರುವ ಅಧಿಕಾರಿಗಳ ಕುರಿತು ಹಗುರವಾಗಿ ಮಾತನಾಡುವ ಹಕ್ಕು ಈ ಮಹಿಳೆಗೆ ಕೊಟ್ಟವರು ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರ ತಂದೆ ಎಂ.ಕೆ. ಚಂದ್ರಶೇಖರ್ ಖುದ್ದು ವಾಯುಸೇನೆಯಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿದ್ದು, ಯೋಧರಿಗೆ ಗೌರವ ಕೊಡುವುದು ದೇಶಕ್ಕೆ ಗೌರವ ಕೊಟ್ಟಂತೆ ಎಂದೇ ರಾಜೀವ್ ಚಂದ್ರಶೇಖರ್ ನಂಬಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಿವೃತ್ತ ಯೋಧರಿಗೆ ಮಾಡಿದ ಅವಮಾನಕ್ಕೆ ರಾಜೀವ್ ಅತ್ತಂತ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.