ಭೋಪಾಲ್[ಸೆ.11]: ಮಧ್ಯಪ್ರದೇಶದ ಕ್ರೀಡಾ ಸಚಿವ ಜೀತೂ ಪಟ್ವಾರಿ ಬುಧವಾರದಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡಿದ್ದಾರೆ. ಕಮಲನಾಥ್ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿರುವ ಜೀತೂ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಟ್ರಾಫಿಕ್ ನಿಯಂತ್ರಿಸುತ್ತಿರುವುದನ್ನು ನೋಡಬಹುದಾಗಿದೆ. 

ಹೌದು ಕ್ರೀಡಾ ಸಚಿವ ಜೀತೂ ಪಟ್ವಾರಿ ಇಂದೋರ್ ನಲ್ಲಿ ಖುದ್ದು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದರು. ಬಹಳ ಸಮಯ ಕಾದರೂ ವಾಹನ ಚಲಿಸದಿರುವುದನ್ನು ಗಮನಿಸಿದ ಸಚಿವರು ತಾವೇ ಗಾಡಿಯಿಂದಿಳಿದು ಟ್ರಾಫಿಕ್ ಪೊಲೀಸರಂತೆ, ಟ್ರಾಫಿಕ್ ಕ್ಲಿಯರ್ ಮಾಡಿಸಿದ್ದಾರೆ. ಸಚಿವರ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಂಗಳವಾರ ಸಂಜೆ ನಡೆದ ಘಟನೆ

ಈ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಸುದ್ದಿ ಸಂಸ್ಥೆ ANI ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಇನ್ನು ಖುದ್ದು ಸಚಿವರೇ ಟ್ರಾಫಿಕ್ ಕ್ಲಿಯರ್ ಮಾಡಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರೂ ಅಚ್ಚರಿಗೀಡಾಗಿದ್ದಾರೆ. ಮತ್ತೆ ಕೆಲವರು ತಾವೂ ಸಚಿವರ ಸಹಾಯಕ್ಕೆ ಧಾವಿಸಿ ಟ್ರಾಫಿಕ್ ಕ್ಲಿಯರ್ ಆಗಲು ಸಹಕರಿಸಿದ್ದಾರೆನ್ನಲಾಗಿದೆ.

ಇನ್ನು ಘಟನೆ ನಡೆದಾಗ ಟ್ರಾಫಿಕ್ ಸಿಗ್ನಲ್ ನೀಡುವ ದೀಪಗಳೂ ಕೆಟ್ಟಿದ್ದವು. ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದುದರಿಂದ ಪೊಲೀಸರೂ ಟ್ರಾಫಿಕ್ ಕಂಟ್ರೋಲ್ ಮಾಡಲು ಕಷ್ಟಪಡುತ್ತಿದ್ದರು. ಹೀಗಾಗಿ ಸಚಿವರು ತಾವೇ ಈ ಕೆಲಸಕ್ಕೆ ಮುಂದಾಗಿದ್ದಾರೆ.

ಹೆಲ್ಮೆಟ್ ಧರಿಸಿದ ಬೈಕ್ ಚಾಲಕರಿಗೆ ಫುಲ್ ಕ್ಲಾಸ್

ಟ್ರಾಫಿಕ್ ನಿಯಂತ್ರಿಸುತ್ತಿದ್ದ ಜೀತೂ ಪಟ್ವಾರಿ ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘಿಸಿದ ಬೈಕ್ ಸವಾರರಿಗೂ ಸಚಿವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸಚಿವರ ಈ ಸರಳತೆ ಹಾಗೂ ದಿಟ್ಟ ನಡೆ ಯುವಕರ ಮೆಚ್ಚುಗೆಗೆ ಪಾತ್ರವಾಗಿದೆ.