ಹೊಶಂಗಾಬಾದ್‌[ಫೆ.24]: ರೈಲಿಂದ ಕೆಳಗೆ ಬಿದ್ದು ಸಾವು-ಬದುಕಿನಲ್ಲಿ ಹೋರಾಡುತ್ತಿದ್ದ ವ್ಯಕ್ತಿಯೋರ್ವನ ಬದುಕಿಸಲು ಆತನನ್ನು ಮಧ್ಯಪ್ರದೇಶದ ಪೊಲೀಸ್‌ ಸಿಬ್ಬಂದಿಯೊಬ್ಬರು ತನ್ನ ಹೆಗಲ ಮೇಲೆಯೇ 1.5 ಕಿ.ಮೀ ದೂರ ಕ್ರಮಿಸುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಶನಿವಾರದಂದು ಸಿಯೋನಿ ಮಾಳ್ವಾದ ರಾವಣ್‌ ಪಿಪಲ್ಗಾಂವ್‌ ಎಂಬಲ್ಲಿ ರೈಲಿನಿಂದ ಕೆಳಗೆ ಬಿದ್ದ ಅಜಿತ್‌(20) ಎಂಬ ಯುವಕ ರೈಲ್ವೆ ಹಳಿಗಳ ಪಕ್ಕದಲ್ಲೇ ಕುಳಿತು ರೋದಿಸುತ್ತಿದ್ದ. ಈ ಬಗ್ಗೆ ಮಾಹಿತಿ ಲಭ್ಯವಾದ ತತ್‌ಕ್ಷಣವೇ ಪೊಲೀಸ್‌ ಸಿಬ್ಬಂದಿ ಪೂನಂ ಬಿಲ್ಲೋರ್‌ ಎಂಬುವರು ಸ್ಥಳಕ್ಕಾಗಮಿಸಿದರು. ಆದರೆ, ಸಂತ್ರಸ್ತ ಬಿದ್ದಿದ್ದ ಸ್ಥಳಕ್ಕೆ ವಾಹನ ಸಂಪರ್ಕ ಕಲ್ಪಿಸಲು ಅಸಾಧ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಬಿಲ್ಲೋರ್‌ ಅವರು ಓಡಿ ಹೋಗಿ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಸಂತ್ರಸ್ತನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡೇ 1.5 ಕಿ.ಮೀನಷ್ಟುದೂರ ನಿಂತಿದ್ದ ಪೊಲೀಸ್‌ ಜೀಪಿಗೆ ತಂದು ಹಾಕಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಪೊಲೀಸ್‌ ಸಿಬ್ಬಂದಿ ಬಗ್ಗೆ ಗೌರವ ವ್ಯಕ್ತವಾಗುತ್ತಿದೆ.