ಭದ್ರತಾ ಸಿಬ್ಬಂದಿ ಮಗು ಇಲ್ಲವೆಂದಾದಲ್ಲಿ ಬ್ರೆಸ್ಟ್ ಪಂಪ್ ಇಟ್ಟುಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. ಬಳಿಕ ತಪಾಸಣಾ ಕೋಣೆಗೆ ಕರೆದುಕೊಂಡು ಹೋಗಿ ಮೊಲೆ ಹಿಸುಕಿ, ಹಾಲು ಬರುತ್ತದೆಯೇ ಎಂದು ಪರೀಕ್ಷಿಸಿದರು ಎಂದು ಗಾಯತ್ರಿ ದೂರಿದ್ದಾರೆ.

ಬರ್ಲಿನ್(ಜ.31): ವಿದೇಶಿ ವಿಮಾನ ನಿಲ್ದಾಣಗಳಲ್ಲಿ ಭಾರತೀಯರ ಅವಹೇಳನ ಮುಂದುವರೆದಿದೆ. ಜರ್ಮನಿಯ ಫ್ರಾಂಕ್‌'ಫರ್ಟ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಭದ್ರತಾಧಿಕಾರಿಗಳು ಭಾರತೀಯ ಮೂಲದ ಸಿಂಗಾಪುರ ಮಹಿಳೆಯ ಸ್ತನವನ್ನು ಕಿವುಚಿ ಈಕೆ ಮೊಲೆಹಾಲು ಉಣಿಸುತ್ತಾಳಾ ಎಂದು ಪರೀಕ್ಷಿಸಿದ ಹೇಯ ಘಟನೆ ನಡೆದಿದೆ.

ಗಾಯತ್ರಿ ಬೋಸ್ ಎಂಬ 33 ವರ್ಷದ ಮಹಿಳೆಯೇ ಅವಮಾನಕ್ಕಕೊಳಗಾದವರು. ಈ ಘಟನೆಯಿಂದ ತಾನು ಅವಮಾನಕ್ಕೊಳಗಾಗಿದ್ದು, ಕಾನೂನು ಕ್ರಮ ಜರುಗಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಗಾಯತ್ರಿ ಹೇಳಿದ್ದಾರೆ.

ಜರ್ಮನಿಯ ಫ್ರಾಂಕ್‌'ಫರ್ಟ್ ವಿಮಾನ ನಿಲ್ದಾಣದಿಂದ ಪ್ಯಾರಿಸ್‌'ಗೆ ಪಯಣಿಸಲು ಕಳೆದ ಗುರುವಾರ ಆಗಮಿಸಿದ್ದರು. ಈಕೆ 3 ವರ್ಷದ ಮಗುವಿನ ತಾಯಿಯಾಗಿದ್ದು, ಮೊಲೆಹಾಲುಣಿಸಲು ನೆರವಾಗುವ ಬ್ರೆಸ್ಟ್ ಪಂಪ್ ಇಟ್ಟುಕೊಂಡಿದ್ದಳು. ಆದರೆ ಪ್ರಯಾಣದ ಸಂದರ್ಭದಲ್ಲಿ ಗಾಯತ್ರಿ ಜತೆ ಮಗು ಇರಲಿಲ್ಲ.

ಇದರಿಂದ ಸಂದೇಹಗೊಂಡ ಭದ್ರತಾ ಸಿಬ್ಬಂದಿ ಮಗು ಇಲ್ಲವೆಂದಾದಲ್ಲಿ ಬ್ರೆಸ್ಟ್ ಪಂಪ್ ಇಟ್ಟುಕೊಂಡಿದ್ದೇಕೆ ಎಂದು ಪ್ರಶ್ನಿಸಿದರು. ಬಳಿಕ ತಪಾಸಣಾ ಕೋಣೆಗೆ ಕರೆದುಕೊಂಡು ಹೋಗಿ ಮೊಲೆ ಹಿಸುಕಿ, ಹಾಲು ಬರುತ್ತದೆಯೇ ಎಂದು ಪರೀಕ್ಷಿಸಿದರು ಎಂದು ಗಾಯತ್ರಿ ದೂರಿದ್ದಾರೆ.