ಗಂಡನ ಬದಲು ಸೈನಿಕನ ಕೈಗೆ ಮಗುವಿತ್ತ ತಾಯಿ: ರೋಚಕತೆ ಹಂಚಿಕೊಂಡ ಕರ್ನಲ್!

ಪತಿ ಕೈ ಮುಂದೆ ಮಾಡಿದರೂ ಮಗುವನ್ನು ಸೈನಿಕನ ಕೈಗಿತ್ತ ಳು | ರಕ್ಷಣಾ ಕಾರ‌್ಯಾಚರಣೆಯ ರೋಚಕತೆ ಹಂಚಿಕೊಂಡ ಕರ್ನಲ್| 

Mother gave Her Baby To Soldier Instead Of Husband Colonel Sachin Jain Shares His Experience Of Rescue Operation

-ಈಶ್ವರ ಶೆಟ್ಟರ

ಬಾಗಲಕೋಟೆ[ಆ.14]: ‘ಕೃಷ್ಣಾ ಪ್ರವಾಹ ಪೀಡಿತ ಪ್ರದೇಶವಾದ ಜಮಖಂಡಿ ತಾಲೂ ಕಿನ ಮುತ್ತೂರ ಗ್ರಾಮದಲ್ಲಿ ಜನರ ರಕ್ಷಣಾ ಕಾರ‌್ಯಾಚರಣೆ ಭರದಿಂದ ಸಾಗಿತ್ತು. ಈ ವೇಳೆ ಮಹಿಳೆ, ಆಕೆಯ ಮಗು, ಪತಿಯನ್ನು ರಕ್ಷಿಸಲು ಮುಂದಾಗಿದ್ದೆವು. ಮೊದಲು ಬೋಟ್ ಏರಿದ ಆಕೆಯ ಪತಿ, ಮಗುವನ್ನು ತನ್ನ ಕೈಗೆ ಕೊಡುವಂತೆ ಕೈಚಾಚಿದ. ಆದರೆ, ಆಕೆ ತನ್ನ ಪತಿಯ ಕೈಗೆ ಮಗುವನ್ನು ಕೊಡದೇ ನಮ್ಮ ಕೈಗೆ ಮಗುವನ್ನಿಟ್ಟಳು. ಆಕೆಯ ಈ ನಡೆ ನಮ್ಮ ಮೇಲಿನ ವಿಶ್ವಾಸಾರ್ಹತೆ ಮಗದಷ್ಟು ಹೆಚ್ಚಿಸಿತು’

ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕೃಷ್ಣಾ, ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಕರ್ನಲ್ ಸಚಿನ್ ಜೈನ್ ಅನುಭವದ ಮಾತುಗಳಿವು. ಸತತ 6 ದಿನಗಳ ಕಾಲ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರ ರಕ್ಷಣೆ ಮಾಡಿ ಮಂಗಳವಾರ ತಮ್ಮೂರಿನತ್ತ ಹೊರಟ ಸಚಿನ್ ಜೈನ್ ಮನಬಿಚ್ಚಿ ಮಾತನಾಡಿದ್ದಾರೆ.

16 ಗಂಟೆ ಮನೆ ಮೇಲೆ ಕಾಯಬೇಕಾಯ್ತು: ಮುಧೋಳ ತಾಲೂಕಿನ ರೂಗಿ ಗ್ರಾಮದ ಸಂತ್ರಸ್ತರ ರಕ್ಷಣೆಗೆ 7 ಮಂದಿ ಸೇನಾ ಸಿಬ್ಬಂದಿ ಬೋಟ್‌ನಲ್ಲಿ ತೆರಳಿದ್ದಾಗ ನೀರಿನ ರಭಸ ಹೆಚ್ಚಾಯಿತು. ನಮ್ಮವರಿದ್ದ ಬೋಟ್ ನಿಯಂತ್ರಣಕ್ಕೆ ಬಾರದೆ, ಗ್ರಾಮದ ಮನೆಯೊಂದರ ಮೇಲೆ ಸುಮಾರು 16 ಗಂಟೆಗಳ ಕಾಲ ಕಾದೆವು. ಕೊನೆಗೆ ವಾಯುಪಡೆ ಹೆಲಿಕಾಪ್ಟರ್ ಮೂಲಕ ನಮ್ಮನ್ನು ಸೇರಿ ಎಲ್ಲಾ ಸಂತ್ರಸ್ತರನ್ನು ರಕ್ಷಿಸಲಾಯಿತು.

ಸವಾಲಾದ ಪಟ್ಟದಕಲ್ಲು:

ವಿಶ್ವ ಪಾರಂಪರಿಕ ತಾಣವಾದ ಪಟ್ಟದಕಲ್ಲಿನ ದೇವಾಲಯ ಸಮುಚ್ಚಯಗಳು ಸಂಪೂರ್ಣ ವಾಗಿ ಜಲಾವೃಗೊಂಡು, ಗ್ರಾಮಸ್ಥರು ಸ್ಮಾರಕಗಳನ್ನೇರಿ ಕುಳಿತಿದ್ದರು. ಸ್ಮಾರಕಗಳ ಸಮುಚ್ಚಯದ ದಾರಿ ತೀರಾ ಇಕ್ಕಟ್ಟಾಗಿದ್ದರಿಂದ ಕಾರ್ಯಾಚರಣೆ ತೀರ ಸವಾಲಿಂದ ಕೂಡಿತ್ತು. ನೆರೆ ಸಂತ್ರಸ್ತರನ್ನು ಸ್ಥಳಾಂತರಕ್ಕೆ ಒಪ್ಪಿಸುವುದೇ ಬಹುದೊಡ್ಡ ಸವಾಲಾಗಿತ್ತು. ಆದರೂ ನಮ್ಮ ಸೇನಾ ಸಿಬ್ಬಂದಿ ಚಾಕಚಾಕ್ಯತೆಯಿಂದ ಎಲ್ಲರನ್ನು ರಕ್ಷಿಸಿದರು.

1600 ಪ್ರವಾಹ ಸಂತ್ರಸ್ತರ ರಕ್ಷಣೆ

ಪ್ರವಾಹದಿಂದ ತತ್ತರಿಸಿದ್ದ ಜಮಖಂಡಿ, ಮುಧೋಳ ಹಾಗೂ ಬಾದಾಮಿ ಸುತ್ತಲಿನ ಕಾರ್ಯಾಚರಣೆಯಲ್ಲಿ ಒಟ್ಟು 1600 ಸಂತ್ರಸ್ತರನ್ನು ರಕ್ಷಿಸಲಾಗಿದೆ. ಮಲಪ್ರಭಾ ನದಿಯ ಪಟ್ಟದಕಲ್ಲಿನಲ್ಲಿ 118 ಗ್ರಾಮಸ್ಥರನ್ನು ರಕ್ಷಿಸಿದ್ದೇವೆ. 200 ಮಂದಿ ಸೇರಿ ಈ ಕಾರ್ಯಾಚರಣೆ ನಡೆಸಿದೆವು ಎಂದು ಸಚಿನ್ ನೆನೆದರು.

ಮೂಲತಃ ಉತ್ತರ ಪ್ರದೇಶದವರಾದ ಸಚಿನ ಜೈನ್ ತ್ರಿಪುರಾ, ಅಸ್ಸಾಂ ಪ್ರವಾಹ ಹಾಗೂ ಅಂಡಮಾನ್‌ನಲ್ಲುಂಟಾದ ಸುನಾಮಿ ಸೇರಿದಂತೆ ದೇಶದ ವಿವಿಧೆಡೆ ಉಂಟಾದ ಪ್ರಕೃತಿ ವಿಕೋಪ ಪರಿಸ್ಥಿತಿ ಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಮ್ಮ 19 ವರ್ಷಗಳ ಸುದೀರ್ಘ ಅನುಭವದಲ್ಲಿ ಬಾಗಲಕೋಟೆಯ ಪ್ರವಾಹ ಕಾರ್ಯಾಚರಣೆ ಸದಾ ನೆನಪಿನಲ್ಲಿರುತ್ತದೆ ಎನ್ನುತ್ತಾರೆ ಸಚಿನ್.

Latest Videos
Follow Us:
Download App:
  • android
  • ios