ಜವರಯ್ಯ ಎಂಬ ಹೆಸರಿನ ಈ ಹುಡುಗ ಅಕ್ಟೋಬರ್ 3, 2005ರಂದು ನೆಲಮಂಗಲದಲ್ಲಿನ ಮನೆಯಿಂದ ಕಾಣೆಯಾಗಿರುತ್ತಾನೆ. ಆತನನ್ನು ಹುಡುಕಿಕೊಡುವಂತೆ ಪೋಷಕರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಅರ್ಜಿಯನ್ನೂ ಸಲ್ಲಿಸುತ್ತಾರೆ. ತೀರಾ ಒಂದು ವರ್ಷದ ಈಚಿನವರೆಗೂ ಆತನನ್ನು ಹುಡುಕುವ ಪ್ರಯತ್ನವನ್ನು ಪೋಷಕರು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಆತ ಸತ್ತಿರಬಹುದೆಂದು ಅಂದಾಜಿಸಿ ಹುಡಕಾಟ ನಿಲ್ಲಿಸಿರುತ್ತಾರೆ.
ಶಿವಮೊಗ್ಗ(ಜೂನ್ 6): ಕೆಲ ದಿನಗಳ ಹಿಂದೆ ಟಿವಿಯಲ್ಲಿ ನೀವು ಮೆಗ್ಗಾನ್ ಆಸ್ಪತ್ರೆಯ ಬಗ್ಗೆ ಸುದ್ದಿಗಳನ್ನು ನೋಡಿರುತ್ತೀರಿ. ಸ್ಟ್ರೆಚರ್ ಇಲ್ಲದೆ ವೃದ್ಧರೊಬ್ಬರನ್ನು ಆಕೆಯ ಪತ್ನಿ ನೆಲದಲ್ಲಿ ದರದರನೆ ಎಳೆದುಕೊಂಡು ಹೋಗುತ್ತಿದ್ದ ದೃಶ್ಯವು ಮೆಗ್ಗಾನ್ ಆಸ್ಪತ್ರೆಯನ್ನು ದೊಡ್ಡ ವಿಲನ್ ಆಗಿ ಮಾಡಿತ್ತು. ಪ್ರತಿಯೊಂದು ಕೆಲಸಕ್ಕೂ ಆಸ್ಪತ್ರೆಯ ಸಿಬ್ಬಂದಿ ಲಂಚ ಕೇಳುತ್ತಾರೆಂಬ ಆರೋಪಗಳು ನಿರಂತರವಾಗಿ ಕೇಳಿಬಂದಿದ್ದವು. ಆದರೆ ಈಗ ಮೆಗ್ಗಾನ್ ಆಸ್ಪತ್ರೆಯ ಮೇಲೆ ಸ್ವಲ್ಪ ಗೌರವ ಮೂಡಿಸುವಂಥ ಸುದ್ದಿಯೊಂದು ಬಂದಿದೆ.
12 ವರ್ಷ ಪೋಷಣೆ:
12 ವರ್ಷದ ಹಿಂದೆ ಅಪಘಾತದಿಂದ ಗಾಯಗೊಂಡ 8 ವರ್ಷದ ಬಾಲಕನೊಬ್ಬ ಮೆಗ್ಗಾನ್ ಆಸ್ಪತ್ರೆ ಸೇರಿರುತ್ತಾನೆ. ಆತನ ಜೊತೆ ತಂದೆ-ತಾಯಿ ಅಥವಾ ಪೋಷಕರಾಗಲೀ ಯಾರೂ ಇರುವುದಿಲ್ಲ. ಆಸ್ಪತ್ರೆಯ ಪಿಡಿಯಾಟ್ರಿಕ್ಸ್ ವಿಭಾಗದಲ್ಲಿ ದಾಖಲಾಗಿದ್ದ ಆ ಬಾಲಕನಿಗೆ ಸರಿಯಾಗಿ ಮಾತನಾಡಲೂ ಬರುತ್ತಿರಲಿಲ್ಲ. ಆದರೆ, ಆಸ್ಪತ್ರೆಯ ಸಿಬ್ಬಂದಿಯೇ ಈ ಬಾಲಕನ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಾರೆ. ಅಷ್ಟೇ ಅಲ್ಲ, ಮುಗ್ಧಬಾಲಕನನ್ನು ಪೋಷಿಕೊಂಡು ಹೋಗುತ್ತಾರೆ. 12 ವರ್ಷಗಳ ಕಾಲ ಆತನನ್ನು ಆಸ್ಪತ್ರೆಯ ಸಿಬ್ಬಂದಿಯೇ ಬೆಳೆಸುತ್ತಾರೆ.
ಟಿವಿಯಲ್ಲಿ ಈತನನ್ನು ಕಂಡ ಹೆತ್ತವರು:
ಇತ್ತೀಚೆಗೆ ಮೆಗ್ಗಾನ್ ಆಸ್ಪತ್ರೆ ವಿವಾದಕ್ಕೆ ಸಿಲುಕಿದಾಗ ಸುವರ್ಣನ್ಯೂಸ್ ವಾಹಿನಿ ಸೇರಿದಂತೆ ಟಿವಿಗಳಲ್ಲಿ ಆಸ್ಪತ್ರೆಯ ದೃಶ್ಯಗಳು ನಿರಂತರವಾಗಿ ಪ್ರಸಾರವಾಗುತ್ತಿದ್ದವು. ಆ ದೃಶ್ಯಗಳಲ್ಲಿ ಈ ಯುವಕ ಕೂಡ ಕಾಣಿಸಿಕೊಂಡಿರುತ್ತಾನೆ. ರಾಮನಗರದಲ್ಲಿದ್ದ ಈ ಯುವಕನ ತಾಯಿ ಹಾಗೂ ಬಂಧುಗಳ ಕಣ್ಣಿಗೆ ಈ ಯುವಕ ಬೀಳುತ್ತಾನೆ. ತನ್ನಂತೆಯೇ ಈತನ ಹೋಲಿಕೆ ಇರುವುದನ್ನು ಕಂಡ ತಾಯಿಯು ಅನುಮಾನದಲ್ಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಧಾವಿಸುತ್ತಾರೆ. ಅಲ್ಲಿದ್ದದ್ದು ತನ್ನ ಮಗನೇ ಎಂಬುದು ಆಕೆಗೆ ದೃಢಪಡುತ್ತದೆ.
ಜವರಯ್ಯ ಎಂಬ ಹೆಸರಿನ ಈ ಹುಡುಗ ಅಕ್ಟೋಬರ್ 3, 2005ರಂದು ನೆಲಮಂಗಲದಲ್ಲಿನ ಮನೆಯಿಂದ ಕಾಣೆಯಾಗಿರುತ್ತಾನೆ. ಆತನನ್ನು ಹುಡುಕಿಕೊಡುವಂತೆ ಪೋಷಕರು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಅರ್ಜಿಯನ್ನೂ ಸಲ್ಲಿಸುತ್ತಾರೆ. ತೀರಾ ಒಂದು ವರ್ಷದ ಈಚಿನವರೆಗೂ ಆತನನ್ನು ಹುಡುಕುವ ಪ್ರಯತ್ನವನ್ನು ಪೋಷಕರು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಆತ ಸತ್ತಿರಬಹುದೆಂದು ಅಂದಾಜಿಸಿ ಹುಡಕಾಟ ನಿಲ್ಲಿಸಿರುತ್ತಾರೆ.
ಈಗ ಆ ಹುಡುಗ 12 ವರ್ಷಗಳ ಬಳಿಕ ಪೋಷಕರನ್ನು ಮತ್ತೆ ಕೂಡಿಕೊಳ್ಳುವಂತಾಗಿದೆ. ಇದಕ್ಕೆ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ತೋರಿದ ಮಾನವೀಯತೆ ಪ್ರಮುಖ ಕಾರಣ ಎಂಬುದರಲ್ಲಿ ಸಂಶಯವಿಲ್ಲ.