ದಾವೂದ್ ಇಬ್ರಾಹಿಂ, ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರ. ಜಗತ್ತಿನ ಕುಖ್ಯಾತ ಭೂಗತ ಪಾತಕಿಗಳ ಪೈಕಿ ಮೊದಲಿಗ. ಸಾವಿರಾರು ಕೋಟಿ ರೂ. ಆಸ್ತಿ ಇದೆ. ಹಲವು ದೇಶಗಳಲ್ಲಿ ಈತನ ಬಂಟರಿದ್ದಾರೆ. ವಿಚಿತ್ರವೆಂದರೆ ಆತ ತನ್ನ ಪುತ್ರನನ್ನೇ ಎದುರಿಸಲಾಗದೇ ಸೋತು ಹೋಗಿದ್ದಾನೆ.
ಮುಂಬೈ (ನ.26): ದಾವೂದ್ ಇಬ್ರಾಹಿಂ, ಭಾರತದ ಪಾಲಿಗೆ ಮೋಸ್ಟ್ ವಾಂಟೆಡ್ ಉಗ್ರ. ಜಗತ್ತಿನ ಕುಖ್ಯಾತ ಭೂಗತ ಪಾತಕಿಗಳ ಪೈಕಿ ಮೊದಲಿಗ. ಸಾವಿರಾರು ಕೋಟಿ ರೂ. ಆಸ್ತಿ ಇದೆ. ಹಲವು ದೇಶಗಳಲ್ಲಿ ಈತನ ಬಂಟರಿದ್ದಾರೆ. ವಿಚಿತ್ರವೆಂದರೆ ಆತ ತನ್ನ ಪುತ್ರನನ್ನೇ ಎದುರಿಸಲಾಗದೇ ಸೋತು ಹೋಗಿದ್ದಾನೆ.
ತನ್ನ ಸಾವಿರಾರು ಕೋಟಿ ರೂ ವಹಿವಾಟನ್ನು ಮುನ್ನಡೆಸಬೇಕಿದ್ದ ಪುತ್ರ, ನಡೆದುಕೊಳ್ಳುತ್ತಿರುವ ರೀತಿ ನೋಡಿ ದಾವೂದ್ ಅಕ್ಷರಶಃ ಕಂಗಾಲಾಗಿ ಹೋಗಿದ್ದಾನೆ. ನಿಜ. ದಾವೂದ್‌ಗೆ ಮೂವರು ಮಕ್ಕಳು. ಈ ಪೈಕಿ ಇಬ್ಬರು ಹೆಣ್ಣು ಮಕ್ಕಳು. ಕೊನೆಯವ ಪುತ್ರ. ಹೆಸರು ಮೊಯಿನ್ ನವಾಜ್ ಡಿ.ಕಸ್ಕರ್ (31). ಆತನಿಗೋ ಅಪ್ಪನ ವ್ಯವಹಾರ, ದಂಧೆ ಒಂದಿಂಚೂ ಇಷ್ಟವಿಲ್ಲ. ಭಾರೀ ಧರ್ಮನಿಷ್ಠನಾಗಿರುವ ಮೊಯಿನ್ ಅಪ್ಪನ ವ್ಯವಹಾರಗಳಿಂದ ಪೂರ್ಣ ಪ್ರಮಾಣದಲ್ಲಿ ದೂರವಾಗಿ ಕರಾಚಿಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದಾನೆ. ಇಡೀ ಕುರಾನ್ ಅನ್ನು ಕಂಠಪಾಠ ಮಾಡಿರುವ ಮೊಯಿನ್ ಅತ್ಯಂತ ಗೌರವಾನ್ವಿಯ ಮೌಲ್ವಿಯಾಗಿ ಹೊಮ್ಮಿದ್ದಾನೆ.
2001 ರಲ್ಲಿ ಪಾಕಿಸ್ತಾನದ ಮೂಲದ ಬ್ರಿಟನ್ ಉದ್ಯಮಿಯೊಬ್ಬರ ಪುತ್ರಿ ಸಾನಿಯಾಳನ್ನು ವರಿಸಿರುವ ಮೊಯಿನ್, ಅಪ್ಪನ ಐಷಾರಾಮಿ ಬಂಗಲೆ ಬದಲು, ಮಸೀದಿ ಪಕ್ಕದಲ್ಲೇ ಸಾಮಾನ್ಯ ಮನೆಯೊಂದರಲ್ಲಿ ವಾಸಿಸುವ ಮೂಲಕ ಅಂತರ ಕಾಯ್ದುಕೊಳ್ಳುವ ಯತ್ನ ನಡೆಸಿದ್ದಾನೆ. ಒಂದೆಡೆ ತನ್ನ ಸೋದರ ಇಕ್ಬಾಲ್ ಕಸ್ಕರ್‌ನನ್ನು ಮುಂಬೈ ಪೊಲೀಸರು ಬಂಧಿಸಿ, ವಿಚಾರಣೆಗೆ ಗುರಿಪಡಿಸಿದ್ದರೆ, ಮತ್ತೊಂದೆಡೆ ಪುತ್ರನ ನಡವಳಿಕೆಯಿಂದ ದಾವೂದ್ ಕಂಗಾಲಾಗಿ ಹೋಗಿದ್ದಾನಂತೆ. ಜೊತೆಗೆ ಇನ್ನೊಬ್ಬ ಸೋದರ ಅನೀಸ್ ಇಬ್ರಾಹಿಂ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಮುಂದಿನ ದಿನಗಳಲ್ಲಿ ತನ್ನ ಬಲಗೈ ಆಗಲಿದ್ದಾರೆ ಎಂದೆಣಿಸಿದ್ದ ಮೂವರೂ ಹೀಗೆ ತನ್ನಿಂದ ದೂರವಾಗಿರುವುದರಿಂದ ದಾವೂದ್ ತೀವ್ರ ಮನನೊಂದಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.
