Asianet Suvarna News Asianet Suvarna News

ಕಾಂಗ್ರೆಸ್‌ನ ಬಹುತೇಕ ಶಾಸಕರು ಹೋಟೆಲ್‌ ಬಿಟ್ಟು ಮನೆಗೆ!

ಕಾಂಗ್ರೆಸ್‌ನ ಬಹುತೇಕ ಶಾಸಕರು ಹೋಟೆಲ್‌ ಬಿಟ್ಟು ಮನೆಗೆ| ಬಿಜೆಪಿ, ಜೆಡಿಎಸ್‌ ಶಾಸಕರು ಅಧಿವೇಶನದಿಂದ ಸೀದಾ ರೆಸಾರ್ಟ್‌ಗೆ| ಹೋಟೆಲ್‌ ವಾಸದಿಂದ ಬೇಸತ್ತು ಮನೆಗೆ ತೆರಳಿದ ಕಾಂಗ್ರೆಸಿಗರು

Most Of The Congress MLAs Returns To Their House From Hotel
Author
Bangalore, First Published Jul 16, 2019, 8:45 AM IST

 ಬೆಂಗಳೂರು[ಜು.16]: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ರೆಸಾರ್ಟ್‌ವಾಸಿಗಳಾಗಿದ್ದ ರಾಜ್ಯದ ಮೂರೂ ಪ್ರಧಾನ ಪಕ್ಷದ ಶಾಸಕರು ಸೋಮವಾರ ರೆಸಾರ್ಟ್‌ನಿಂದಲೇ ನೇರವಾಗಿ ಬಸ್ಸುಗಳ ಮೂಲಕ ಕಲಾಪಕ್ಕೆ ಆಗಮಿಸಿ ಪಕ್ಷದ ನಾಯಕರ ಕಣ್ಗಾವಲಿನಲ್ಲಿ ಮತ್ತೆ ರೆಸಾರ್ಟ್‌ ಗೂಡು ಸೇರಿಕೊಂಡರು.

ಸೋಮವಾರ ಕಲಾಪ ಸಲಹಾ ಸಮಿತಿಯಲ್ಲಿ ಅವಿಶ್ವಾಸ ಮಂಡನೆಗೆ ಬಿಜೆಪಿ ಒತ್ತಾಯಿಸಬಹುದು ಅಥವಾ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ವಯಂಪ್ರೇರಿತವಾಗಿ ವಿಶ್ವಾಸಮತ ಯಾಚಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಕರೆತಂದರು. ಕಲಾಪ ಮುಗಿದ ನಂತರ ಶಾಸಕರನ್ನು ಮತ್ತೆ ರೆಸಾರ್ಟ್‌ಗೆ ಕರೆದೊಯ್ಯಲಾಯಿತು.

ಈ ವೇಳೆ ಆಯಾ ಪಕ್ಷದ ನಾಯಕರು ಶಾಸಕರನ್ನು ನೋಡಿಕೊಳ್ಳುವ ಸಲುವಾಗಿಯೇ ಉಸ್ತುವಾರಿಗಳನ್ನು ನೇಮಿಸಿದ್ದು, ತಮ್ಮ ಶಾಸಕರು ಯಾರ ಜತೆಗೂ ಸಂಪರ್ಕ ಸಾಧಿಸಿದಂತೆ ಉಸ್ತುವಾರಿ ಹೊತ್ತವರು ನಿಗಾ ವಹಿಸಿದರು. ಪ್ರತಿಯೊಬ್ಬ ಶಾಸಕರ ಮೇಲೆ ತೀವ್ರ ಕಣ್ಗಾವಲು ವಹಿಸಿದ್ದ ಆಯಾ ಪಕ್ಷದ ಮುಖ್ಯ ಸಚೇತಕರು, ಉಸ್ತುವಾರಿಗಳು ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್‌ನ ಶಾಸಕರು ರೆಸಾರ್ಟ್‌ಗೆ ಹಿಂತಿರುಗಿದರೆ ಕಾಂಗ್ರೆಸ್‌ನ ಬಹುತೇಕ ಶಾಸಕರು ಹೊಟೇಲ್‌ ವಾಸದಿಂದ ಬೇಸತ್ತು ಕಲಾಪ ಮುಗಿದ ಬಳಿಕ ಮನೆಗಳಿಗೆ ತೆರಳಿದ ಘಟನೆಯೂ ನಡೆಯಿತು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಯಲ್ಲಿ ಕಣ್ಗಾವಲು ಹೆಚ್ಚು:

ಮೂರು ಪಕ್ಷಗಳ ಪೈಕಿ ಬಿಜೆಪಿ ಶಾಸಕರ ಮೇಲೆ ಹೆಚ್ಚಿನ ಕಣ್ಗಾವಲು ಇತ್ತು. ಬಿಜೆಪಿ ಮುಖ್ಯ ಸಚೇತಕ ಸುನೀಲ್‌ಕುಮಾರ್‌ ಅವರು ಬಿಜೆಪಿಯ ಕೆಲ ಶಾಸಕರನ್ನು ತಮ್ಮೊಂದಿಗೆ ಗುಂಪಿನಲ್ಲಿ ಕರೆದೊಯ್ಯುತ್ತಿದ್ದದ್ದು ವಿಧಾನಸಭೆಯ ಮೊಗಸಾಲೆಯಲ್ಲಿ ಕಂಡುಬಂತು. ಈ ಗುಂಪಿನಲ್ಲಿದ್ದ ಶಾಸಕರು ಮೊಗಸಾಲೆಯಲ್ಲಿ ಬೇರೆಯವರೊಂದಿಗೆ ಮಾತನಾಡಲು ಮುಂದಾದರೂ ಅವರನ್ನು ಮತ್ತೆ ಎಳೆದುಕೊಂಡು ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಿದ್ದರು. ಅಲ್ಲದೆ, ನೀವು ನನಗೆ ಕುತ್ತಿಗೆಗೆ ತರ್ತೀರಯ್ಯಾ. ನಿಮಗೆ ಕೈ ಮುಗೀತೀನಿ, ಎಲ್ಲಿಗೂ ಹೋಗಬೇಡಿ ಇಲ್ಲೇ ನಿಲ್ಲಿ ಎಂದು ಮನವಿ ಮಾಡುತ್ತಿದ್ದದ್ದು ಕಂಡುಬಂತು.

ನಾ ರೆಸಾರ್ಟ್‌ಗೋಗೋದಿಲ್ಲ:

ಬಿಜೆಪಿಯ ಎಲ್ಲಾ ಶಾಸಕರು ಕಲಾಪದ ಬಳಿಕ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ರಮಡ ರೆಸಾರ್ಟ್‌ ಹಾಗೂ ಹೋಟೆಲ್‌ ಸಾಯಿಲೀಲಾಗೆ, ಜೆಡಿಎಸ್‌ ಶಾಸಕರು ದೇವನಹಳ್ಳಿ ರೆಸಾರ್ಟ್‌ಗೆ ಸೇರಿಕೊಂಡರು.

ಸೋಮವಾರ ಬೆಳಗ್ಗೆ ತಾಜ್‌ ವಿವಾಂತದಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದಲ್ಲಿ ಭಾಗವಹಿಸಿ ಸದನಕ್ಕೆ ಆಗಮಿಸಿದ ಶಾಸಕರಲ್ಲಿ ಬಹುತೇಕರು ಹೋಟೆಲ್‌ಗೆ ವಾಪಸಾಗಲಿಲ್ಲ. ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿರುವ ಶಾಸಕರಿಗೆ ನಿರ್ಬಂಧ ಸಡಿಲಿಸಿದ ಪರಿಣಾಮ ಹಾಗೂ ಎರಡು ದಿನಗಳ ಕಾಲ ಕಲಾಪಕ್ಕೆ ಬಿಡುವು ದೊರೆತ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ವಾಪಸಾಗಲಿಲ್ಲ ಎಂದು ಹೇಳಲಾಗಿದೆ.

ಎರಡು ಬಸ್ಸಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಶಾಸಕರಲ್ಲಿ ನಾಲ್ಕೈದು ಮಂದಿ ಮಾತ್ರ ಹೋಟೆಲ್‌ಗೆ ವಾಪಸ್ಸಾಗಿದ್ದರು. ಇನ್ನು ಎಂ.ಕೃಷ್ಣಪ್ಪ ಸೇರಿದಂತೆ ಕೆಲ ಶಾಸಕರು ಖಾಸಗಿ ಕಾರಿನಲ್ಲಿ ಆಗಮಿಸಿ ಲಗೇಜು ಪ್ಯಾಕ್‌ ಮಾಡಿಕೊಂಡು ತಮ್ಮ ನಿವಾಸಕ್ಕೆ ತೆರಳಿದರು.

Follow Us:
Download App:
  • android
  • ios