ಜಾನ್ಸನ್ ಮಾರ್ಕೆಟ್ ಬಳಿ ಹೊಸೂರು ರಸ್ತೆಯಿಂದ ಬ್ರಿಗೇಡ್ ರಸ್ತೆ ಕಡೆಗೆ ವಾಹನಗಳು ಸಂಚರಿಸುವ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವುದನ್ನು ತಡೆಯುವ ಸಲುವಾಗಿ ಇಲ್ಲಿನ ಶಿಯಾ ಮಸೀದಿ ಕಾಂಪೌಂಡ್‌ಅನ್ನು ಬಿಬಿಎಂಪಿ ತೆರವುಗೊಳಿಸಿದೆ.
ಬೆಂಗಳೂರು: ಜಾನ್ಸನ್ ಮಾರ್ಕೆಟ್ ಬಳಿ ಹೊಸೂರು ರಸ್ತೆಯಿಂದ ಬ್ರಿಗೇಡ್ ರಸ್ತೆ ಕಡೆಗೆ ವಾಹನಗಳು ಸಂಚರಿಸುವ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವುದನ್ನು ತಡೆಯುವ ಸಲುವಾಗಿ ಇಲ್ಲಿನ ಶಿಯಾ ಮಸೀದಿ ಕಾಂಪೌಂಡ್ಅನ್ನು ಬಿಬಿಎಂಪಿ ತೆರವುಗೊಳಿಸಿದೆ.
ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಕಾಂಪೌಂಡ್ ತೆರವು ಮಾಡಲು ಶಿಯಾ ಕಬ್ರಸ್ತಾನ ನಿರ್ವಹಣಾ ಸಮಿತಿ ಮುಂದೆ ಬಂದ ಹಿನ್ನೆಲೆಯಲ್ಲಿ ಕಾಂಪೌಂಡ್ ತೆರವು ಮಾಡಲಾಯಿತು. ಮೇಯರ್ ಆರ್.ಸಂಪತ್ರಾಜ್, ಸ್ಥಳೀಯ ಶಾಸಕ ಎನ್.ಎ.ಹ್ಯಾರಿಸ್ ನೇತೃತ್ವದಲ್ಲಿ ಮಸೀದಿಯ ಸುಮಾರು 1 ಸಾವಿರ ಚದರ ಅಡಿ ಜಾಗದ ಕಾಂಪೌಂಡ್’ಅನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ಮಸೀದಿ ಕಾಂಪೌಂಡ್ ತೆರವಿನಿಂದ ಹೊಸೂರು ರಸ್ತೆಯಿಂದ ಬ್ರಿಗೇಡ್ ರಸ್ತೆವರೆಗೆ ಸಂಚರಿಸುವಾಗ ಕಳೆದ ನಾಲ್ಕೈದು ವರ್ಷಗಳಿಂದ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಆರ್.ಸಂಪತ್ ರಾಜ್, ಸರ್ಕಾರ ಹಾಗೂ ಬಿಬಿಎಂಪಿ ಮನವಿಗೆ ಸಹಕರಿಸಿ ಮಸೀದಿ ಕಾಂಪೌಂಡ್ ತೆರವಿಗೆ ಶಿಯಾ ಕಬ್ರಸ್ತಾನ್ ನಿರ್ವಹಣಾ ಸಮಿತಿಗೆ ಧನ್ಯವಾದ ತಿಳಿಸುತ್ತೇನೆ.
ಇದರಿಂದ ಈ ಮಾರ್ಗದಲ್ಲಿ ಇಲ್ಲಿಯವರೆಗೆ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ. ಕಾಂಪೌಂಡ್ ತೆರವುಗೊಳಿಸಿದ ಜಾಗದಲ್ಲಿ ಸಮರ್ಪಕವಾದ ರಸ್ತೆ ಅಭಿವೃದ್ಧಿ ಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಬದಲೀ ಜಾಗಕ್ಕೆ ಬೇಡಿಕೆ: ಮಸೀದಿ ಕಾಂಪೌಂಡ್ ತೆರವು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಸರಿ ಮಸೀದಿ ಹಾಗೂ ಶಿಯಾ ಕಬ್ರಸ್ತಾನ್ ನಿರ್ವಹಣಾ ಸಮಿತಿ ಅಧ್ಯಕ್ಷ ಮಿರ್ ಅಲಿ ಜವಾದ್ ಅವರು, ಸರ್ಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ತೊಂದರೆ ಕೊಡುವು ಉದ್ದೇಶ ನಮಗಿಲ್ಲ. ಕಳೆದ ಐದಾರು ವರ್ಷದಿಂದ ಮಸೀದಿ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿತ್ತು. ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಮಸೀದಿ ಕಾಂಪೌಂಡ್ ತೆರವಿಗೆ ಸಮಿತಿ ಒಪ್ಪಿಗೆ ನೀಡಿದೆ ಎಂದರು.
ಒಂದು ಸಾವಿರ ಚದರ ಅಡಿಯಷ್ಟು ಕಾಂಪೌಂಡ್ ಜಾಗ ತೆರವು ಮಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ನಮಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದೀಗ ಸಮಿತಿಯು ಟಿಡಿಆರ್ ಬದಲು ಬೇರೆಡೆ ಸೂಕ್ತ ಸ್ಥಳಾವಕಾಶ ನೀಡಿದರೆ ಅಲ್ಲಿ ಮಸೀದಿ ಕಟ್ಟಿಕೊಳ್ಳಲು ನಿರ್ಧರಿಸಿದೆ. ಹಾಗಾಗಿ ಬಿಬಿಎಂಪಿ ರಸ್ತೆ ಅಭಿವೃದ್ಧಿಗೆ ಸ್ವಾಧೀನ ಪಡಿಸಿಕೊಂಡಿರುವ ಜಾಗಕ್ಕೆ ಪರ್ಯಾಯವಾಗಿ ನಗರದ ಬೇರೆಡೆ ಸೂಕ್ತ ಜಾಗ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಮಸೀದಿ ಬಳಿಯ ವೆಲ್ಲಾರ್ ಜಕ್ಷನ್ಗೆ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹೆಸರಿಡಬೇಕು. ಮಸೀದಿ ಪಕ್ಕದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಾದ ಇಮಾಮ್ ಹುಸೇನ್ ನಿಲ್ದಾಣ ಎಂದು ಹೆಸರಿಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಥಳೀಯ ಶಾಸಕ ಎನ್.ಎ.ಹ್ಯಾರಿಸ್ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮಸೀದಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ವೆಲ್ಲಾರ್ ಜಂಕ್ಷನ್ಗೆ ಸರ್ ಮಿರ್ಜಾ ಇಸ್ಮಾಯಿಲ್ ಅವರ ನಾಮಕರಣ ಮಾಡುವ ಬಗ್ಗೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ
ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ಸಂಪತ್ರಾಜ್ ಭರವಸೆ ನೀಡಿದರು. ಅಲ್ಲದೆ, ಮೆಟ್ರೋ ನಿಲ್ದಾಣಕ್ಕೆ ಇಮಾಮ್ ಹುಸೇನ್ ಹೆಸರಿಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಬಿಎಂಆರ್ಸಿಎಲ್ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
