Asianet Suvarna News Asianet Suvarna News

ಬೆಂಗಳೂರಲ್ಲಿ ಕಳೆದೊಂದು ವಾರದಲ್ಲಿ 7500 ಸೋಂಕಿತರು ನಾಪತ್ತೆ..!

ಮೊದಲೇ ಕೊರೋನಾ ಸೋಂಕಿಗೆ ಬೆಂಗಳೂರು ತತ್ತರಿಸಿ ಹೋಗಿದೆ. ಹೀಗಿರುವಾಗಲೇ ಹೊಣೆಗೇಡಿ ಜನಗಳಿಂದಾಗಿ ಬಿಬಿಎಂಪಿಗೆ ಇದೀಗ ಹೊಸದೊಂದು ತಲೆನೋವು ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕಿತ ಏಳೂವರೆ ಸಾವಿರಕ್ಕೂ ಅಧಿಕ ಮಂದಿ ದಿಢೀರ್ ನಾಪತ್ತೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

more then 7500 Corona Patient Missing in Bengaluru says BBMP Reports kvn
Author
Bengaluru, First Published Oct 16, 2020, 8:49 AM IST

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.16): ಬೆಂಗಳೂರಿನಲ್ಲಿ ಕಳೆದ ಕೇವಲ ಏಳು ದಿನಗಳಲ್ಲಿ ಸುಮಾರು ಏಳೂವರೆ ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ!

ಬಿಬಿಎಂಪಿಯೇ ಅಧಿಕೃತವಾಗಿ ನೀಡುತ್ತಿರುವ ಮಾಹಿತಿ ಪ್ರಕಾರ ಕಳೆದ ಏಳು ದಿನಗಳಲ್ಲಿ 7,630 ಮಂದಿ ಸೋಂಕು ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ನಂತರ ಹಠಾತ್‌ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ನೀಡಿದ್ದ ವಿಳಾಸದಲ್ಲಿ ಅವರು ಇಲ್ಲ. ಅವರು ಏನಾದರು, ಎಲ್ಲಿಗೆ ಹೋದರು ಎಂಬುದು ಪತ್ತೆಯಾಗುತ್ತಿಲ್ಲ.

ಏಕೆಂದರೆ, ಸೋಂಕು ಖಚಿತವಾಗುತ್ತಿದ್ದಂತೆಯೇ ಇವರು ಉದ್ದೇಶಪೂರ್ವಕವಾಗಿ ಬಿಬಿಎಂಪಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ ಈ ಸೋಂಕಿತರು ಹಾಗೂ ಅವರ ಸಂಪರ್ಕಿತರ ಪತ್ತೆ ಕಾರ್ಯ ಮಾಡಲು ಬಿಬಿಎಂಪಿ ಅಧಿಕಾರಿಗಳಿಂದ ಆಗುತ್ತಿಲ್ಲ. ಇಂತಹ ಹೊಣೆಗೇಡಿ ಸೋಂಕಿತರಿಂದಾಗಿಯೇ ನಗರದಲ್ಲಿ ಕರೋನಾ ವ್ಯಾಪಕವಾಗಿ ಹಬ್ಬುತ್ತಿದೆ.

ನಗರದಲ್ಲಿ ಸುಳ್ಳು ಮನೆ ವಿಳಾಸ, ತಪ್ಪು ಮೊಬೈಲ್‌ ಸಂಖ್ಯೆ ನೀಡಿ ಕೊರೋನಾ ಸೋಂಕಿತರು ನಾಪತ್ತೆಯಾಗುವುದು ಮೊದಲಿನಿಂದಲೂ ಇದೆ. ಆದರೀಗ ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ದೃಢಪಟ್ಟವರು ಸಾರ್ವಜನಿಕರ ಮಧ್ಯೆ ಓಡಾಡಿಕೊಂಡು ಇತರರಿಗೆ ಸೋಂಕು ಹರಡುವ ವಾಹಕರಾಗಿದ್ದಾರೆ. ಸೋಂಕು ಪರೀಕ್ಷೆ ವೇಳೆ ಫೋನ್‌ ನಂಬರ್‌ ಹಾಗೂ ವಿಳಾಸ ದೃಢಿಕರಣ ಸಹ ಪಡೆಯಲಾಗಿದೆ. ಆದರೂ ಸುಳ್ಳು ಮಾಹಿತಿ ನೀಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ಪ್ರತಿದಿನ ಶೇ.25ರಷ್ಟು ಪ್ರಕರಣ ನಾಪತ್ತೆ:

ಬಿಬಿಎಂಪಿ ನೀಡಿದ ಮಾಹಿತಿ ಪ್ರಕಾರವೇ ಅ.6ರಿಂದ ಅ.12ರ ಅವಧಿಯ ಏಳು ದಿನದಲ್ಲಿ ಬಿಬಿಎಂಪಿಯ ಎಂಟು ವಲಯದಲ್ಲಿ ಒಟ್ಟು 30,882 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ 7,630 ಮಂದಿ ಬಿಬಿಎಂಪಿ ಅಧಿಕಾರಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ. ನಗರದಲ್ಲಿ ನಿತ್ಯ 40 ಸಾವಿರ ಸೋಂಕು ಪರೀಕ್ಷೆ ನಡೆಸಿ, ಅಜಮಾಸು ಐದು ಸಾವಿರ ಸೋಂಕಿತರನ್ನು ಪತ್ತೆ ಮಾಡಲಾಗುತ್ತಿದೆ. ಈ ಪೈಕಿ ಶೇ.25ರಷ್ಟುಎಂದರೆ ಒಂದು ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗುತ್ತಿದ್ದಾರೆ ಎಂಬುದು ಬಿಬಿಎಂಪಿ ಅಂಕಿ ಅಂಶಗಳಿಂದ ದೃಢಪಟ್ಟಿದೆ.

76 ಸಾವಿರ ಸಂಪರ್ಕಿತರ ಪತ್ತೆಯೂ ನಿಗೂಢ:

ಸೋಂಕಿತನ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕ ಹೊಂದಿದ ಕನಿಷ್ಠ 10 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದರೆ ಮಹಾಮಾರಿ ನಿಯಂತ್ರಿಸಬಹುದು ಎಂಬುದು ಒಂದು ಲೆಕ್ಕಾಚಾರ. ಇದರ ಪ್ರಕಾರ ಕಳೆದ ಒಂದು ವಾರದಲ್ಲಿ ನಾಪತ್ತೆಯಾದ ಸೋಂಕಿತರ ಸಂಪರ್ಕಗಳನ್ನು ಅಂದರೆ 76,300 ಮಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಅದು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿಯೇ ನಗರದಲ್ಲಿ ಸೋಂಕು ನಿಯಂತ್ರಣ ತಪ್ಪಿದೆ ಎನ್ನುತ್ತಾರೆ ತಜ್ಞರು.

ಪೊಲೀಸರಿಂದಲೂ ಪತ್ತೆ ಅಸಾಧ್ಯ

ತಪ್ಪು ದೂರವಾಣಿ ಸಂಖ್ಯೆ, ಸುಳ್ಳು ವಿಳಾಸ ನೀಡಿರುವ ಕೊರೋನಾ ಸೋಂಕಿತರ ಪತ್ತೆಗೆ ಪೊಲೀಸ್‌ ಇಲಾಖೆಯ ನೆರವು ಪಡೆಯಲಾಗುತ್ತಿದೆ. ಸೋಂಕಿತರ ಮೊಬೈಲ್‌ ಕರೆ ವಿವರವನ್ನು ಬಿಬಿಎಂಪಿ ಅಧಿಕಾರಿಗಳು ಪೊಲೀಸ್‌ ಇಲಾಖೆಗೆ ನೀಡುತ್ತಾರೆ. ಆದರೆ, ಕೆಲವು ಸೋಂಕಿತರು ಒಂದು ವರ್ಷದ ಹಿಂದೆ ಬಳಕೆ ಮಾಡಿದ ಮೊಬೈಲ್‌ ಸಂಖ್ಯೆ ಹಾಗೂ ತಪ್ಪು ವಿಳಾಸಗಳನ್ನು ನೀಡಿದ್ದಾರೆ. ಹೀಗಾಗಿ, ಪೊಲೀಸರಿಂದಲೂ ಕೆಲವು ಪ್ರಕರಣದ ಪತ್ತೆ ಸಾಧ್ಯವಾಗುತ್ತಿಲ್ಲ.

ನಾಪತ್ತೆ ಪ್ರಕರಣದ ವಲಯವಾರು ವಿವರ (ಅ.6-ಅ.12)

ವಲಯ ಒಟ್ಟು ಪ್ರಕರಣ ನಾಪತ್ತೆ ಪ್ರಕರಣ ಶೇಕಡ

ಪೂರ್ವ 4,519 1,429 31.63

ಪಶ್ಚಿಮ 5,281 1,194 22.61

ದಕ್ಷಿಣ 5,117 1,257 24.57

ಆರ್‌ಆರ್‌ನಗರ 3,284 961 29.27

ದಾಸರಹಳ್ಳಿ 1,384 317 22.93

ಮಹದೇವಪುರ 3,998 1,127 28.19

ಬೊಮ್ಮನಹಳ್ಳಿ 3,948 812 20.6

ಯಲಹಂಕ 3,351 532 15.88

ಒಟ್ಟು 30,882 7,630 24.20

Follow Us:
Download App:
  • android
  • ios