Asianet Suvarna News Asianet Suvarna News

ವಿಶ್ವದಲ್ಲಿ ಎಲ್ಲೂ ಇಷ್ಟು ದೊಡ್ಡ ಸಂಗ್ರಹವಿಲ್ಲ; ಟಿಪ್ಪು ಕಾಲದ 100 ಕ್ಕೂ ಹೆಚ್ಚು ರಾಕೆಟ್'ಗಳು ಬೆಳಕಿಗೆ

ಮೂರ್ನಾಲ್ಕು ವರ್ಷಗಳ ಹಿಂದೆ ಹೊಸನಗರ ತಾಲೂಕು ನಗರ ಗ್ರಾಮದ ಬಾವಿಯೊಂದರಲ್ಲಿ ಸಿಕ್ಕಿದ್ದ ಕಬ್ಬಿಣದ ತುಂಡುಗಳು ಈಗ ಟಿಪ್ಪು ಸುಲ್ತಾನ್ ಕಾಲದ ರಾಕೆಟ್‌ಗಳೆಂದು ಸಾಬೀತಾಗಿದೆ. 100 ಕ್ಕೂ ಹೆಚ್ಚು ರಾಕೆಟ್‌'ಗಳು ಈಗ ನಗರದ ಶಿವಪ್ಪನಾಯಕ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಸೇರ್ಪಡೆಯಾದಂತಾಗಿದೆ.

more than 100 rockets come to light which belongs to Tippu Sultan Period

ಶಿವಮೊಗ್ಗ (ಜ.20):  ಮೂರ್ನಾಲ್ಕು ವರ್ಷಗಳ ಹಿಂದೆ ಹೊಸನಗರ ತಾಲೂಕು ನಗರ ಗ್ರಾಮದ ಬಾವಿಯೊಂದರಲ್ಲಿ ಸಿಕ್ಕಿದ್ದ ಕಬ್ಬಿಣದ ತುಂಡುಗಳು ಈಗ ಟಿಪ್ಪು ಸುಲ್ತಾನ್ ಕಾಲದ ರಾಕೆಟ್‌ಗಳೆಂದು ಸಾಬೀತಾಗಿದೆ. 100 ಕ್ಕೂ ಹೆಚ್ಚು ರಾಕೆಟ್‌'ಗಳು ಈಗ ನಗರದ ಶಿವಪ್ಪನಾಯಕ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಸೇರ್ಪಡೆಯಾದಂತಾಗಿದೆ.

ಮತ್ತೊಂದು ವಿಶೇಷವೆಂದರೆ 18 ನೇ ಶತಮಾನದಲ್ಲಿ ತಯಾರಾದ ಈ ರಾಕೆಟ್‌ಗಳು ಇಂಗ್ಲೆಂಡ್‌ನ ವುಲ್‌ವಿಚ್ ಪ್ರಯೋಗಶಾಲೆಯಲ್ಲಿ ಎರಡು, ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯಲದಲ್ಲಿ 3 ಮಾತ್ರ ಇವೆ. ಆದರೆ 18 ನೇ ಶತಮಾನದ ಕಬ್ಬಿಣದ ರಾಕೆಟ್‌ಗಳ 100 ಕ್ಕೂ ಹೆಚ್ಚು ಸಂಗ್ರಹ ಪ್ರಪಂಚದ ಯಾವ ಸಂಗ್ರಹಾಲಯದಲ್ಲೂ ಇಲ್ಲ. ಹಾಗಾಗಿಯೇ ಈ ಸಂಗ್ರಹ ಮಹತ್ವ ಪಡೆದಿದೆ.

ಇತಿಹಾಸದಲ್ಲಿ ದಾಖಲಾಗಿರುವಂತೆ 18 ನೇ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನದ ಅರಸರಾಗಿದ್ದ ಹೈದರಾಲಿ-ಟಿಪ್ಪು ಅವರು ಮೊಟ್ಟಮೊದಲು ರಾಕೆಟ್‌ಗಳನ್ನು ಬಳಸಿದರು. ನಂತರ ಸಿಂಹಾಸನವನ್ನೇರಿದ ಮೈಸೂರು ಅರಸರೂ ಸಹ ಈ ತಂತ್ರಜ್ಞಾನ ಮುಂದುವರಿಸಿದರು. ಕೆಳದಿ ಸಂಸ್ಥಾನದ ರಾಜಧಾನಿಯಾಗಿದ್ದ ಹೊಸನಗರ ತಾಲೂಕಿನ ಬಿದನೂರು ನಗರ ಅವರ ಆಡಳಿತ ವ್ಯಾಪ್ತಿಯಲ್ಲಿಯೇ ಇತ್ತು. ಈಗ ಇದೇ ಗ್ರಾಮದ ನಾಗರಾಜ ರಾವ್ ಅವರು ತಮ್ಮ ತೋಟದಲ್ಲಿದ್ದ ಹಳೇ ಬಾವಿಯನ್ನು ಇನ್ನಷ್ಟು ಆಳ ಮಾಡಲು ಮುಂದಾದಾಗ ಈ ಬೃಹತ್ ಸಂಗ್ರಹ ಪತ್ತೆಯಾಗಿದೆ.

ಮೊದಮೊದಲು ಇದನ್ನು ಮದ್ದುಗುಂಡುಗಳು ಅಥವಾ ಶೆಲ್‌ಗಳೆಂದು ಗುರುತಿಸಲಾಗಿತ್ತು. ಆದರೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಎಚ್.ಎಂ. ಸಿದ್ದನಗೌಡ ಅವರು ಬೆಂಗಳೂರು ಸಂಗ್ರಹಾಲಯದಲ್ಲಿದ್ದ ರಾಕೆಟ್‌ಗಳ ಆಧಾರದ ಮೇಲೆ ಇಲ್ಲಿ ಸಿಕ್ಕಿರುವುದೂ ಸಹ ರಾಕೆಟ್‌ಗಳೇ ಎಂದು ಗುರುತಿಸಿದ್ದಾರೆ.

ಏನಿದು ರಾಕೆಟ್?

ಬ್ರಿಟೀಶ್ ಸೈನ್ಯದ ಎದೆ ನಡುಗಿಸಿದ್ದು ಟಿಪ್ಪು ಸುಲ್ತಾನ್ ರೂಪಿಸಿದ ರಾಕೆಟ್‌ಗಳು ಎಂದು ಇತಿಹಾಸ ಹೇಳುತ್ತದೆ. ಇದಕ್ಕೂ ಮೊದಲು ಕಾಗದ ಅಥವಾ ಮರದಿಂದ ಮಾಡಿದ ರಾಕೆಟ್ ಬಳಸಲಾಗುತ್ತಿತ್ತು. ಕಬ್ಬಿಣದ ರಾಕೆಟ್‌ಗಳನ್ನು ಮೊಟ್ಟಮೊದಲು ಬಳಸಿದ್ದು ಟಿಪ್ಪು. ನಂತರ ಮೈಸೂರು ಅರಸರು ಹಾಗೂ ರಾಜ್ಯದ ಇತರೆಡೆಯ ಅರಸರೂ ಸಹ ಈ ತಂತ್ರಜ್ಞಾನ ಬಳಸುವ ಪ್ರಯತ್ನ ಮಾಡಿದರು. 18 ನೇ ಶತಮಾನದ ದ್ವಿತಿಯಾ‘ರ್ದಲ್ಲಿ ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಮೈಸೂರು ಪ್ರಾಂತ್ಯವನ್ನು ಆಳಿದರು. ಬಿದಿರಿನಲ್ಲಿ ನಿರ್ಮಿಸಿದ ರಾಕೆಟ್ ಲಾಂಚರ್‌ಗಳ ಮೂಲಕ ಸುಮಾರು 7 ರಿಂದ 10 ಇಂಚು ಉದ್ದದ, ಗರಿಷ್ಠ 3 ಇಂಚು ವ್ಯಾಸ ಹೊಂದಿದ ಕಬ್ಬಿಣದ ತುಂಡುಗಳನ್ನು ಈ ಲಾಂಚರ್‌ಗಳ ತುದಿಗೆ ಅಳವಡಿಸಿ ಹಾರಿಸಲಾಗುತ್ತಿತ್ತು. ಸುಮಾರು 2 ಕಿ.ಮೀ. ದೂರಕ್ಕೆ ಚಿಮ್ಮಿ, ನೆಲಕ್ಕೆ ಬಿದ್ದ ಕೂಡಲೇ ಸಿಡಿಯುತ್ತಿದ್ದವು. ತುಕ್ಕು ಹಿಡಿಯದ ಕಬ್ಬಿಣದಿಂದ ಈ ರಾಕೆಟ್‌ಗಳನ್ನು ತಯಾರಿಸಲಾಗುತ್ತಿತ್ತು.

1799 ರಲ್ಲಿ ನಡೆದ ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಹತನಾದ ನಂತರ 1801 ರಲ್ಲಿ 100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಂಗ್ಲೆಂಡ್‌ಗೆ ಕೊಂಡೊಯ್ಯಲಾಯಿತು. ಈ ಪ್ರಯೋಗಾಲದ ನಿಯಂತ್ರಕರಾದ ವಿಲಿಯಂ ಕಾಂಗ್ರಿವ್ ಅವರು ಈ ಮಾದರಿಗಳನ್ನು ಪುನರ್‌ನಿರ್ಮಿಸಿದರು. ಈಗ ಅದರಲ್ಲಿ ಉಳಿದಿರುವುದು ಕೇವಲ 2. ಅವುಗಳನ್ನು ಲಂಡನ್‌ನ ವುಲ್‌ವಿಚ್ ಎಂಬಲ್ಲಿರುವ ‘ದಿ ರಾಯಲ್ ಆರ್ಟಿಲರಿ ಮ್ಯೂಸಿಯಂನ’ನಲ್ಲಿ ಇಡಲಾಗಿದೆ. ಇದನ್ನು ಬಿಟ್ಟರೆ ಇನ್ನೂ 3 ರಾಕೆಟ್‌ಗಳು ಬೆಂಗಳೂರಿನ ಸಂಗ್ರಹಾಲಯದಲ್ಲಿವೆ.

‘ಇದೊಂದು ಅದ್ಭುತ ತಂತ್ರಜ್ಞಾನ. ರಾಕೆಟ್ ಹಾರಿಸಿದಾಗ ಈ ಕಬ್ಬಿಣದ ತುಂಡುಗಳು ಘರ್ಷಣೆಯಲ್ಲಿ ಉತ್ಪತ್ತಿಯಾಗುವ ಬಿಸಿಗೆ ಕರಗಬಾರದು. ಮತ್ತು, ನೆಲಕ್ಕೆ ಬಿದ್ದ ಕೂಡಲೇ ಸಿಡಿಯಬೇಕು. ಈ ರಾಕೆಟ್‌ಗಳು ಟಿಪ್ಪು ಕಾಲದಲ್ಲಿ ಮೊಟ್ಟಮೊದಲು ಬಳಕೆಯಾದವು. ಶಿವಮೊಗ್ಗದಲ್ಲಿ ಸಿಕ್ಕಿರುವ ರಾಕೆಟ್‌ಗಳು ನೂರಾರು ವರ್ಷಗಳ ಕಾಲ ನೀರಿನಲ್ಲಿ, ಮಣ್ಣಿನಡಿಯಲ್ಲಿ ಇದ್ದರೂ ಸಹ ತುಕ್ಕು ಹಿಡಿದಿಲ್ಲ ಎಂಬುದು ವಿಶೇಷ’ ಎನ್ನುತ್ತಾರೆ ಇತಿಹಾಸ ತಜ್ಞ ಜಿ. ನಿದಿನ್ ಒಲಿಕಾರ್.

ಕಣ್ಣ ನೋಟಕ್ಕೆ ನಾಲ್ಕೈದು ಮಾದರಿಗಳು ಇರುವುದು ಗೊತ್ತಾಗಿದೆ. ಇನ್ನಷ್ಟು ಸಂಶೋಧನೆ ನಡೆದರೆ ಬೆಳಕು ಚೆಲ್ಲಬಹುದು ಎನ್ನುವ ಅವರು, ಬಿದನೂರು ನಗರ ಮೈಸೂರು ಸಂಸ್ಥಾನ ಆಡಳಿತಕ್ಕೆ ಒಳಪಟ್ಟಿತ್ತು. ಹಾಗಾಗಿ ಇಲ್ಲಿಯೂ ಪತ್ತೆಯಾಗಿವೆ ಎಂದು ‘ಕನ್ನಡಪ್ರ‘’ಕ್ಕೆ ತಿಳಿಸಿದರು.

-ವರದಿ: ಹೊನ್ನಾಳಿ ಚಂದ್ರಶೇಖರ್,

Follow Us:
Download App:
  • android
  • ios