Asianet Suvarna News Asianet Suvarna News

ಶೀಘ್ರ ಮತ್ತಷ್ಟು ಆಸ್ಪತ್ರೆ, ಲ್ಯಾಬ್‌ಗೆ ಐಟಿ ಶಾಕ್?

  • ವೈದ್ಯರಿಂದ ₹500 ಕೋಟಿಗಿಂತ ಅಧಿಕ ಅಕ್ರಮ ಶಂಕೆ
  • ತೆರಿಗೆ ಇಲಾಖೆ ವಿಶೇಷ ತಂಡದಿಂದ ಮಾಹಿತಿ ಸಂಗ್ರಹ
More Hospitals Labs To Get IT Shock Soon

ಬೆಂಗಳೂರು: ಖ್ಯಾತ ಸ್ತ್ರೀರೋಗ ತಜ್ಞೆ ಡಾ| ಕಾಮಿನಿರಾವ್ ಅವರದ್ದು ಸೇರಿದಂತೆ ಎರಡು ಐವಿಎಫ್ (ಕೃತಕ ಗರ್ಭಧಾರಣೆ) ಕೇಂದ್ರಗಳು ಹಾಗೂ ಐದು ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿ 100 ಕೋಟಿ ರು. ಕಾಳಧನ ಪತ್ತೆ ಹಚ್ಚಿರುವ ಆದಾಯ ತೆರಿಗೆ ಅಧಿಕಾರಿಗಳು, ಈ ಜಾಲದ ಆಳಕ್ಕೆ ಇಳಿಯಲು ಮುಂದಾಗಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಮತ್ತಷ್ಟು ವೈದ್ಯರು, ಆಸ್ಪತ್ರೆ ಹಾಗೂ ಲ್ಯಾಬ್‌ಗಳ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ನಡೆಯುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ದಾಳಿಯು ಮತ್ತಷ್ಟು ದಾಳಿಗಳ ಮುನ್ಸೂಚನೆಯಾಗಿದ್ದು, ಅಕ್ರಮದಲ್ಲಿ ಶಾಮೀಲಾಗಿರುವ ವೈದ್ಯರಿಗೆ ಬಲೆ ಬೀಸುವ ಸಲುವಾಗಿ ಅಧಿಕಾರಿಗಳು ಕಾರ್ಯಯೋಜನೆ ಸಿದ್ಧಪಡಿಸುತ್ತಿದ್ದಾರೆ. ಇದಕ್ಕಾಗಿ ವಿಶೇಷ ತಂಡವೊಂದು ಕಾರ್ಯ ಆರಂಭಿಸಿದೆ ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ರಾಜಕಾರಣಿಗಳು ಮತ್ತು ವಿವಿಧ ವಲಯದ ಉದ್ಯಮಿಗಳಂತೆ ಕ್ಲಿನಿಕ್, ಡಯಾಗ್ನೋಸ್ಟಿಕ್ ಸೆಂಟರ್, ಲ್ಯಾಬ್‌ಗಳು ಹಾಗೂ ವೈದ್ಯರು ತೆರಿಗೆ ವಂಚನೆಯಿಂದ ಹೊರತಾಗಿಲ್ಲ. ಅಕ್ರಮದಲ್ಲಿ ನೂರಾರು ವೈದ್ಯರು ಭಾಗಿಯಾಗಿದ್ದು, ₹500 ಕೋಟಿಗಿಂತಲೂ ಹೆಚ್ಚು ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಆದರೆ, ಅವ್ಯವಹಾರದ ನಿಖರವಾದ ಲೆಕ್ಕಪತ್ರ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಿದ್ದಾರೆ. ಅಕ್ರಮದಲ್ಲಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಭಾಗಿಯಾಗಿರುವ ಶಂಕೆ ಇದೆ. ಮುಂದಿನ ದಿನಗಳಲ್ಲಿ ಇದು ಬಯಲಾಗಲಿದೆ. ಒಂದಕ್ಕೊಂದು ಕೊಂಡಿಯಂತಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಇದು ಪತ್ತೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಅಂದಹಾಗೆ, ತೆರಿಗೆ ವಂಚಕರ ಹೆಡೆಮುರಿ ಕಟ್ಟುವ ಸಲುವಾಗಿ ಕಾರ್ಯಾಚರಣೆ ಕೈಗೊಂಡಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ದೃಷ್ಟಿ ವೈದ್ಯಕೀಯ ಕ್ಷೇತ್ರದತ್ತ ನೆಡಲು ಕಾರಣವಾಗಿದ್ದು, ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ‘ಕಣ್ವ ಡಯಾಗ್ನೋಸ್ಟಿಕ್ ಸೆಂಟರ್’ ಮೇಲಿನ ದಾಳಿ ವೇಳೆ ಸಿಕ್ಕ ಸುಳಿವು. ಆ ವೇಳೆ ನಡೆಸಿದ ಪರಿಶೀಲನೆಯಲ್ಲಿ ವೈದ್ಯಕೀಯ ಲೋಕಕ್ಕೆ ಸಂಬಂಧಿಸಿದ ಬೆಚ್ಚಿ ಬೀಳಿಸುವಂತಹ ಅಕ್ರಮಗಳ ಮಾಹಿತಿ ಲಭ್ಯವಾಗಿತ್ತು. ಅದರ ಬೆನ್ನಟ್ಟಿದ್ದ ಅಧಿಕಾರಿಗಳಿಗೆ ವೈದ್ಯರ ಅಕ್ರಮಗಳು ದೊರೆತಿವೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ.

ಮತ್ತಷ್ಟು ದಾಳಿ?: ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲುಗೊಳಿಸಲು ಈಗಾಗಲೇ ಐಟಿ ಇಲಾಖೆಯ ವಿಶೇಷ ತಂಡ ಕಾರ್ಯಪ್ರವೃತ್ತವಾಗಿದ್ದು, ತಂಡದ ಸಿಬ್ಬಂದಿ ಡಯಾಗ್ನೋಸ್ಟಿಕ್ ಸೆಂಟರ್, ಲ್ಯಾಬ್‌ಗಳು, ಕ್ಲಿನಿಕ್‌ಗಳ ಅಕ್ರಮಗಳ ತೀವ್ರ ನಿಗಾವಹಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಕಾಮಿನಿರಾವ್ ಅವರಿಗೆ ಸೇರಿದ ಕೇಂದ್ರ ಒಳಗೊಂಡಂತೆ ಎರಡು ಐವಿಎಫ್ ಕೇಂದ್ರಗಳು ಹಾಗೂ ಐದು ಡಯಾಗ್ನೋಸ್ಟಿಕ್ ಸೆಂಟರ್’ಗಳ ಮೇಲಿನ ದಾಳಿಯು ಮತ್ತಷ್ಟು ವೈದ್ಯರು, ಆಸ್ಪತ್ರೆಗಳು, ಲ್ಯಾಬ್‌ಗಳ ಮೇಲಿನ ದಾಳಿಗೆ ಮುನ್ಸೂಚನೆಯಾಗಿದೆ. ರೋಗಿಗಳಿಂದ ಸುಲಿಗೆ ಮಾಡುವ ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯರ ಕಮಿಷನ್ ದಂಧೆಯ ಅಕ್ರಮಗಳನ್ನು ಬಹಿರಂಗಗೊಳಿಸಲು ಐಟಿ ಅಧಿಕಾರಿಗಳು ಯೋಜನೆ ರೂಪಿಸುವಲ್ಲಿ ತೊಡಗಿದ್ದು, ಶೀಘ್ರದಲ್ಲಿಯೇ ಕಾರ್ಯಾಚರಣೆ ನಡೆಯಲಿದೆ.

‘ಕಣ್ವ’ ದಾಳಿಯಿಂದ ತಿರುವು:ಕಳೆದ ತಿಂಗಳು ಐಟಿ ಇಲಾಖೆ ಅಧಿಕಾರಿಗಳು ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಂಸ್ಥೆಯ ಅವ್ಯವಹಾರದ ಜತೆಗೆ ವೈದ್ಯರ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸುಳಿವು ಲಭ್ಯವಾಗಿತ್ತು. ಈ ಸುಳಿವನ್ನು ಬೆನ್ನಟ್ಟಿದ್ದಾಗ ಕ್ಲಿನಿಕ್, ಡಯಾಗ್ನೋಸ್ಟಿಕ್ ಸೆಂಟರ್, ಲ್ಯಾಬ್‌ಗಳು ವೈದ್ಯರಿಗೆ ಪಾವತಿಸುವ ಶಿಫಾರಸು ಶುಲ್ಕದ ಅಕ್ರಮದ ಮಾಹಿತಿ ಲಭ್ಯವಾಗಿತ್ತು.

ಕಾಮಿನಿ ಸೇರಿ ಹಲವರಿಗೆ ಶೀಘ್ರ ನೋಟಿಸ್?

ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಕಾಮಿನಿರಾವ್ ಅವರಿಗೆ ಸೇರಿದ ಕೇಂದ್ರವು ಸೇರಿದಂತೆ ಎರಡು ಐವಿಎಫ್ ಕೇಂದ್ರಗಳು ಹಾಗೂ ಐದು ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಹಾಜರಾಗುವಂತೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಿದ್ದಾರೆ.

ದಾಳಿ ವೇಳೆ ವಶಪಡಿಸಿಕೊಂಡಿರುವ ದಾಖಲೆ ಮತ್ತು ಅಕ್ರಮಗಳ ಬಗ್ಗೆ ಸ್ಪಷ್ಟನೆ ಪಡೆಯಲು ಐಟಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮಾಲೀಕರು, ಡಾ.ಕಾಮಿನಿರಾವ್ ಸೇರಿದಂತೆ ಇತರೆ ಐವಿಎಫ್ ಕೇಂದ್ರದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಐಟಿ ಮೂಲಗಳು ಹೇಳಿವೆ.

100 ಕೋಟಿ ರು. ಅಘೋಷಿತ ಆದಾಯದ ದಾಖಲೆ, ಒಂದು ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಸುಮಾರು 200 ಕೋಟಿ ರು.ನಷ್ಟು ಮೊತ್ತದ ಶಿಫಾರಸು ಶುಲ್ಕ ಹಾಗೂ 1.4 ಕೋಟಿ ರು. ನಗದು, 3.5 ಕೆಜಿ ಚಿನ್ನ ಮತ್ತು ಚಿನ್ನದ ಗಟ್ಟಿ, ವಿದೇಶಿ ಕರೆನ್ಸಿ ಹಾಗೂ ವಿದೇಶಿ ಬ್ಯಾಂಕ್ ಖಾತೆಯಲ್ಲಿ ಗೌಪ್ಯವಾಗಿ ಕೋಟ್ಯಂತರ ರು. ಠೇವಣಿ ಇಟ್ಟಿರುವ ದಾಖಲೆಗಳು ಪತ್ತೆಯಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಿದೆ. ಅಲ್ಲದೇ, ಅವುಗಳ ಆದಾಯಕ್ಕೆ ದಾಖಲೆಗಳನ್ನು ತೋರಿಸುವಂತೆ ಸೂಚಿಸಲಾಗುತ್ತದೆ. ದಾಖಲೆಗಳು ಕಾನೂನು ಪ್ರಕಾರ ಇದ್ದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಕಾನೂನುಬಾಹಿರ ಎಂಬುದು ಸಾಬೀತಾದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

 

Follow Us:
Download App:
  • android
  • ios