ಬೆಂಗಳೂರು/ಮುದ್ದೇಬಿಹಾಳ: ಪಶ್ಚಿಮ ಘಟ್ಟಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರ ಸಾಧಾರಣ ಮಳೆ ದಾಖಲಾಗಿದೆ. ಇದರಿಂದಾಗಿ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಗಳ ಒಳ ಹರಿವು ಕುಗ್ಗಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಮತ್ತು ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿಯೂ ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದರಿಂದ ಕೃಷ್ಣಾ ನದಿಗೆ ಹರಿದು ಬರುವ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿದೆ. ವೇದಗಂಗಾ ಮತ್ತು ದೂದ್‌ಗಂಗಾ ನದಿ ನೀರಿನ ಮಟ್ಟದಲ್ಲಿ ಸುಮಾರು 4 ಅಡಿಯಷ್ಟುಇಳಿಕೆಯಾಗಿದೆ. ಹೀಗಾಗಿ ಮುಳುಗಡೆಯಾಗಿದ್ದ ಆರು ಸೇತುವೆಗಳಲ್ಲಿ ಮೂರು ಸೇತುವೆಗಳು ಸಂಚಾರ ಮುಕ್ತವಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಭಾರೀ ಮಳೆ ಸುರಿದರೆ, ಕೆಲವೆಡೆ ಜಿಟಿಜಿಟಿ ಮಳೆಯಾಗಿದೆ. ಕಾರವಾರ, ಕುಮಟಾ, ಹೊನ್ನಾವರ ತಾಲೂಕಿನಲ್ಲಿ ಸಾಮಾನ್ಯ ಮಳೆಯಾಗಿದೆ. ಧಾರವಾಡ, ಹಾವೇರಿ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ ಬಿಸಿಲು, ನಂತರ ಕೆಲವು ಕಾಲ ಮಳೆಯಾಗಿದೆ.

ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಭಾರೀ ಮಳೆಯಾಗಿದೆ. 2 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆ ರಭ​ಸ​ವಾಗಿ ಸುರಿದಿದೆ. ಮೈಸೂರಲ್ಲಿ ಸಂಜೆ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ.

ಆಲಮಟ್ಟಿಶೀಘ್ರ ಭರ್ತಿ:  ಕೃಷ್ಣಾ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆ ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯ ಕೆಲವೇ ದಿನದಳಲ್ಲಿ ಭರ್ತಿಯಾಗಲಿದೆ. 517.60 ಮೀ. ಎತ್ತರದವರೆಗೆ ಗರಿಷ್ಠ 90 ಟಿಎಂಸಿ ನೀರು ಸಂಗ್ರಹಗೊಂಡಿದೆ. ಭಾನುವಾರ ಸಂಜೆ ಜಲಾಶಯಕ್ಕೆ 1.15 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು ಜಲಾಶಯದ ಹೊರಹರಿವು 33,000 ಕ್ಯುಸೆಕ್‌ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.