Asianet Suvarna News Asianet Suvarna News

ರಾಜ್ಯದಲ್ಲಿ ರೌಂಡಪ್ ಕಳೆನಾಶಕ ನಿಷೇಧ..?

ಮಾನ್ಸಾಂಟೋ ಉತ್ಪಾದಿತ ರೌಂಡಪ್‌ ಕಳೆನಾಶಕ ಕ್ಯಾನ್ಸರ್‌ಕಾರಕ ಎಂಬ ವಿದೇಶಿ ವರದಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 

Monsanto Roundup Weed Killer May Ban In Karnataka
Author
Bengaluru, First Published Mar 23, 2019, 8:15 AM IST

ಬೆಂಗಳೂರು :  ‘ಬಹುರಾಷ್ಟ್ರೀಯ ಕೃಷಿ ಕಂಪನಿ ಮಾನ್ಸಾಂಟೋ ಉತ್ಪಾದಿತ ‘ರೌಂಡಪ್‌’ ಕಳೆನಾಶಕ ಕ್ಯಾನ್ಸರ್‌ಕಾರಕ’ ಎಂಬ ವಿದೇಶಿ ವರದಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೃಷಿ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಕಳೆನಾಶಕದ ವಿರುದ್ಧ ರಾಜ್ಯದ ರೈತ ಸಂಘಟನೆಗಳು ಅನೇಕ ಬಾರಿ ದನಿ ಎತ್ತಿದ್ದರೂ ಕ್ರಮ ಕೈಗೊಳ್ಳಲು ಮುಂದಾಗದಿದ್ದ ಇಲಾಖೆ, ಈಗ ವರದಿಗಳು ಪ್ರಕಟವಾದ ನಂತರ ಎಚ್ಚೆತ್ತಿದೆ. ರಾಜ್ಯದಲ್ಲಿ ಈ ಕಳೆನಾಶಕದ ಬಳಕೆ ಪ್ರಮಾಣ, ಆಗಿರಬಹುದಾದ ಹಾನಿ-ಅನಾಹುತಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೃಷಿ ಇಲಾಖೆಯು ಶುಕ್ರವಾರ ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ವರದಿ ಕೈಸೇರಿದ ನಂತರ ಅಂಕಿ-ಅಂಶಗಳನ್ನು ಆಧರಿಸಿ, ಈ ಕಳೆನಾಶಕದ ನಿಯಂತ್ರಣ ಅಥವಾ ನಿಷೇಧದಂತಹ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಈ ನಡುವೆ, ‘ರೌಂಡಪ್‌’ ಬಳಕೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಇತರ ರೈತ ಸಂಘಟನೆಗಳು ಕೂಡಲೇ ರಾಜ್ಯ ಸರ್ಕಾರ ಮಾನ್ಸಾಂಟೋ ಕಂಪನಿಯ ‘ರೌಂಡಪ್‌’ ಮತ್ತು ಇತರ ಹಾನಿಕಾರಕ ರಾಸಾಯನಿಕಗಳನ್ನು ನಿಷೇಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ವ್ಯಾಪಕ ಬಳಕೆ- ದುಷ್ಪರಿಣಾಮ?:

ರಾಜ್ಯದ ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ರೈತರು ಕಳೆ ನಾಶಕವಾಗಿ ಮಾನ್ಸಾಂಟೋ ಕಂಪನಿಯ ‘ರೌಂಡಪ್‌’ ಎಂಬ ಕಳೆನಾಶಕ ಔಷಧಿಯನ್ನು ಬಳಕೆ ಮಾಡುತ್ತಿದ್ದಾರೆ. ಹೆಚ್ಚಾಗಿ ಹತ್ತಿ, ಶುಂಠಿ, ಭತ್ತ, ಕಬ್ಬು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುವ ಮುನ್ನ ಕಳೆ ನಾಶಕವಾಗಿ ಈ ರಾಸಾಯನಿಕವನ್ನು ಬಳಸಲಾಗುತ್ತಿದೆ. ನಿಗದಿತ ಬೆಳೆಯನ್ನು ಹೊರತು ಪಡಿಸಿ ಉಳಿದೆಲ್ಲವೂ ಕಳೆಯೇ ಆಗುತ್ತದೆ. ಯಾವುದೇ ಬೆಳೆಯ ಬಿತ್ತನೆ ಅಥವಾ ನಾಟಿ ಮಾಡುವುದಕ್ಕೂ ಮೊದಲೇ ಒಂದು ಅಥವಾ ಎರಡು ತಿಂಗಳ ಅವಧಿಯಲ್ಲಿ ಗದ್ದೆ, ತೋಟಗಳಲ್ಲಿ ಬೆಳೆದ ಹುಲ್ಲಿನ ಜಾತಿಯ ಕಳೆ ನಾಶಕ್ಕಾಗಿ ಇದನ್ನು ಸಿಂಪಡಣೆ ಮಾಡಲಾಗುತ್ತಿದೆ.

ಈ ಕಳೆನಾಶಕ ಔಷಧಿಯ ಹೆಚ್ಚಿನ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕುಸಿಯುವ ಜೊತೆಗೆ ಇಳುವರಿಯೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಅನೇಕ ಪ್ರಕರಣಗಳು ಕಂಡು ಬಂದಿವೆ. ಹೆಚ್ಚಾಗಿ ಆಧುನಿಕ ಕೃಷಿ ಪದ್ಧತಿಯಲ್ಲಿ ಇದರ ಬಳಕೆ ಜಾಸ್ತಿಯಾಗುತ್ತಿದೆ. ಹೆಚ್ಚಾಗಿ ಒಣಭೂಮಿ ಕೃಷಿ ಪ್ರದೇಶ ಒಳಗೊಂಡಿರುವ ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಇತರ ಕಡೆಗಳಲ್ಲಿ ಮತ್ತು ಕಬ್ಬು ಹೆಚ್ಚಾಗಿ ಬೆಳೆಯುವ ಮಂಡ್ಯ, ಬೆಳಗಾವಿ, ವಿಜಯಪುರ, ದಾವಣಗೆರೆ ಮುಂತಾದ ಕಡೆಗಳಲ್ಲಿಯೂ ‘ರೌಂಡಪ್‌’ ಕಳೆನಾಶದ ಬಳಕೆ ಪ್ರಮಾಣ ಜಾಸ್ತಿ ಇದೆ. ಹೀಗಿರುವಾಗ ತಾವು ಬಳಸುವ ’ರೌಂಡಪ್‌’ ಕಳೆನಾಶಕ ಕ್ಯಾನ್ಸರ್‌ಕಾರಕ ಎಂಬ ವರದಿಯು ರೈತರೂ ಸೇರಿದಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

ಮೊದಲೇ ದೂರಲಾಗಿತ್ತು:

ಕಳೆದ 10-15 ವರ್ಷಗಳಿಂದಲೂ ಮಾನ್ಸಾಂಟೋ ಕಂಪನಿಯ ‘ರೌಂಡಪ್‌’ ಕಳೆನಾಶಕದ ಅಪಾಯಕಾರಿ ಗುಣಗಳ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ದೂರನ್ನು ನೀಡಲಾಗಿತ್ತು. ದೇಶದ ಒಳಗಡೆ ಈ ಕಳೆನಾಶಕದ ಮಾರಾಟಕ್ಕೆ ಬಿಡಬಾರದು ಎಂದು ರೈತ ಸಂಘಟನೆಗಳು ಒತ್ತಾಯ ಮಾಡುತ್ತಲೇ ಬಂದಿವೆ. ಆದರೆ ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಹಾನಿಕಾರಕ ರಾಸಾಯನಿಕದ ನಿಷೇಧಕ್ಕೆ ಮನಸ್ಸು ಮಾಡಿಲ್ಲ. ಮುಖ್ಯವಾಗಿ ರೈತರಿಗೆ ಇದರ ಬಳಕೆಯಿಂದ ಆಗಬಹುದಾದ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವಂತಹ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಈ ಔಷಧಿಗಳ ಬಳಕೆಯಿಂದ ಹಲವು ರೋಗಗಳು ಬರುವ ಸಾಧ್ಯತೆ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದೀಗ ಕ್ಯಾನ್ಸರ್‌ನಂತರ ಮಾರಕ ಕಾಯಿಲೆ ಬರುವ ಸಾಧ್ಯತೆ ವರದಿಯು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಮಾಡುವುದಾಗಿ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌  ತಿಳಿಸಿದ್ದಾರೆ.

ಎಚ್ಚೆತ್ತ ಕೃಷಿ ಇಲಾಖೆ:

ಕನ್ನಡಪ್ರಭ ಶುಕ್ರವಾರ ಮಾನ್ಸಾಂಟೋ ಕಂಪನಿಯ ‘ರೌಂಡಪ್‌’ ಕಳೆನಾಶಕದ ಕುರಿತು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಕೃಷಿ ಇಲಾಖೆ ಶುಕ್ರವಾರವೇ ಅಧಿಕಾರಿಗಳ ಸಭೆ ನಡೆಸಿದ್ದು, ಈ ಕಳೆನಾಶದ ಬಳಕೆಯ ಪ್ರಮಾಣ, ಆಗಿರಬಹುದಾದ ಹಾನಿ, ಅನಾಹುತಗಳ ಕುರಿತು ಪರಿಶೀಲನೆ ನಡೆಸುವಂತೆ ಆಯಾ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಕುರಿತು ಶೀಘ್ರವೇ ವರದಿ ನೀಡಬೇಕು. ಕಳೆನಾಶಕ ಬಳಕೆಯಿಂದ ದುಷ್ಪರಿಣಾಮ ಆಗದಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡಲಾಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್‌ ತಿಳಿಸಿದ್ದಾರೆ.

ಮಾನ್ಸಾಂಟೋ ಕಂಪನಿಯ ಹಲವು ಉತ್ಪನ್ನಗಳು ಹಾನಿಕಾರಕ ಎಂದು ಈ ಹಿಂದೆಯೇ ಬೆಳಕಿಗೆ ಬಂದಿವೆ. ಇದರಲ್ಲಿ ಬಿಟಿ ಹತ್ತಿಯೂ ಒಂದು. ಇದೀಗ ‘ರೌಂಡಪ್‌’ ಕಳೆನಾಶಕದ ಸರದಿ. ಇದರ ಬಳಕೆ ಶೇ.20ರಷ್ಟಿರಬಹುದಾಗಿದೆ. ಸರ್ಕಾರ ಕೂಡಲೇ ಬೆಳೆ ಮತ್ತು ಜನರಿಗೆ ಹಾನಿ ತರಬಹುದಾದ ಈ ರಾಸಾಯನಿಕ ಮಾರಾಟದ ಮೇಲೆ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರ ಹೋರಾಟ ಎದುರಿಸಬೇಕಾಗುತ್ತದೆ. ಆರೋಗ್ಯ ಮತ್ತು ಮಣ್ಣಿನ ಫಲವತ್ತತೆ ಹಿತದೃಷ್ಟಿಯಿಂದ ರೈತರು ಇಂತಹ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕಿದೆ.

- ಕುರುಬೂರು ಶಾಂತಕುಮಾರ್‌, ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

ಮಾಹಿತಿ ಕಲೆಹಾಕಿ ಕ್ರಮ: ಕೃಷಿ ಇಲಾಖೆ

ರೌಂಡಪ್‌ ಕಳೆನಾಶಕವನ್ನು ಬಿತ್ತನೆಗೂ ಮುಂಚೆ ಒಂದು ತಿಂಗಳಿಗಿಂತ ಮೊದಲೇ ಸಿಂಪಡಣೆ ಮಾಡಿ, ಕಳೆ ನಾಶದ ಬಳಿಕ ಭೂಮಿ ಹದ ಮಾಡುವ ಕಾರ್ಯಕ್ಕೆ ರೈತರು ತೊಡಗುತ್ತಾರೆ. ಕಳೆ ಕೀಳುವ ಕೃಷಿ ಕಾರ್ಮಿಕರ ಕೊರತೆಯಿಂದ ಕಳೆ ನಾಶಕದ ಬಳಕೆ ಪ್ರಮಾಣ ಹೆಚ್ಚಾಗಿದೆ. ರಾಜ್ಯದ ಎಲ್ಲೆಡೆಯೂ ಇದನ್ನು ಬಳಸುತ್ತಿದ್ದು, ಎಷ್ಟುಪ್ರಮಾಣದಲ್ಲಿ ಈ ರಾಸಾಯನಿಕ ಬಳಕೆಯಾಗುತ್ತಿದೆ ಎಂಬ ಮಾಹಿತಿ ಇಲ್ಲ. ಕೃಷಿ ಇಲಾಖೆಯಿಂದ ಇಂತಹ ಹಾನಿಕಾರಕ ರಾಸಾಯನಿಕವನ್ನು ರೈತರಿಗೆ ನೀಡುವುದಿಲ್ಲ. ಶೀಘ್ರವೇ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಕ್ರೋಡೀಕರಿಸಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios