ಹಣ ಬಚ್ಚಿಡಲು ಬಾಗಿಲ ಚೌಕಟ್ಟಿನಲ್ಲೇ ಲಾಕರ್

news | Tuesday, January 23rd, 2018
N. Lakshman
Highlights

ಅಕ್ರಮ ಸಂಪತ್ತು ಬಚ್ಚಿಡಲು ಕ್ರಿಮಿನಲ್‌ಗಳು ಮನೆಯ ಗೋಡೆಯೊಳಗೆ ರಹಸ್ಯ ಕಪಾಟು ಮಾಡಿಸುವುದು, ನೆಲದ ಟೈಲ್ಸ್‌ನಡಿಗೆ ಬಾಕ್ಸ್ ಇರಿಸುವುದು... ಹೀಗೆ ನಾನಾ ತಂತ್ರ ಹೆಣೆಯುವುದನ್ನು ನೋಡಿದ್ದೇವೆ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮನೆಯ ಮುಖ್ಯದ್ವಾರದ ಬಾಗಿಲು ಚೌಕಟ್ಟಿನಲ್ಲೇ ರಹಸ್ಯ ಲಾಕರ್ ಮಾಡಿಸಿದ್ದ ಚಾಣಾಕ್ಷನನ್ನು ರಾಜಧಾನಿಯ ಪೊಲೀಸರು ಹಿಡಿದಿದ್ದಾರೆ.

ಬೆಂಗಳೂರು(ಜ.23): ಅಕ್ರಮ ಸಂಪತ್ತು ಬಚ್ಚಿಡಲು ಕ್ರಿಮಿನಲ್‌ಗಳು ಮನೆಯ ಗೋಡೆಯೊಳಗೆ ರಹಸ್ಯ ಕಪಾಟು ಮಾಡಿಸುವುದು, ನೆಲದ ಟೈಲ್ಸ್‌ನಡಿಗೆ ಬಾಕ್ಸ್ ಇರಿಸುವುದು... ಹೀಗೆ ನಾನಾ ತಂತ್ರ ಹೆಣೆಯುವುದನ್ನು ನೋಡಿದ್ದೇವೆ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮನೆಯ ಮುಖ್ಯದ್ವಾರದ ಬಾಗಿಲು ಚೌಕಟ್ಟಿನಲ್ಲೇ ರಹಸ್ಯ ಲಾಕರ್ ಮಾಡಿಸಿದ್ದ ಚಾಣಾಕ್ಷನನ್ನು ರಾಜಧಾನಿಯ ಪೊಲೀಸರು ಹಿಡಿದಿದ್ದಾರೆ.

ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ರೇಣುಕಾ ಪ್ರಸಾದ್ ಎಂಬಾತ ಇನ್ನೊಬ್ಬ ಕೋಟ್ಯಧಿಪತಿ ಉದ್ಯಮಿ ಮಲ್ಲಿಕಾರ್ಜುನ್ ಎಂಬುವರನ್ನು ಅಪಹರಿಸಿದ್ದ. ರೇಣುಕಾ ಪ್ರಸಾದ್ ಎಷ್ಟೊಂದು ಚಾಣಾಕ್ಷನೆಂದರೆ, ಮನೆಯ ತಿಜೋರಿಯಲ್ಲಿ ಹಣ ಬಚ್ಚಿಟ್ಟರೆ ಸಿಕ್ಕಿಬೀಳಬಹುದು ಎಂಬ ಭಯದಿಂದ ಮನೆಯ ಮುಂಬಾಗಿಲಿನ ಚೌಕಟ್ಟಿನಲ್ಲಿ ಒಂದೂವರೆ ಅಡಿ ಉದ್ದದ ಕಳ್ಳಜಾಗ ಸೃಷ್ಟಿಸಿ, ಅದರಲ್ಲಿ ಹಣ ಹಾಗೂ ಪಿಸ್ತೂಲ್ ಬಚ್ಚಿಟ್ಟಿದ್ದ.

ಉದ್ಯಮಿಯಿಂದ ಪಡೆದಿದ್ದ ಒತ್ತೆಹಣಕ್ಕಾಗಿ ಪೊಲೀಸರು ರೇಣುಕಾ ಪ್ರಸಾದ್ ಮನೆಯನ್ನು ಇಂಚಿಂಚೂ ಶೋಧಿಸಿದಾಗ ಬಿಡಿಗಾಸು ಕೂಡ ಪತ್ತೆಯಾಗಿರಲಿಲ್ಲ. ಒತ್ತೆ ಹಣದ ಬಗ್ಗೆ ಎಷ್ಟು ಪ್ರಶ್ನಿಸಿದರೂ ಆತ ತುಟಿ ಬಿಚ್ಚಿರಲಿಲ್ಲ. ಕೊನೆಗೆ ಡಿಸಿಪಿ ಎಸ್.ಗಿರೀಶ್ ನೇತೃತ್ವದ ತಂಡ ಪೊಲೀಸ್ ವರಸೆ ತೋರಿಸಿದಾಗ ಆರೋಪಿ ಹಣ ಇಟ್ಟಿರುವ ಲಾಕರ್ ತೋರಿಸಿದ್ದ. ಅದುವೇ ಬಾಗಿಲಿನ ಚೌಕಟ್ಟಿನಲ್ಲಿ ಮಾಡಿಸಲಾಗಿದ್ದ ಅಯಸ್ಕಾಂತ ವ್ಯವಸ್ಥೆಯ ಲಾಕರ್.

ಇದನ್ನು ನೋಡಿ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಕೆಲಕಾಲ ದಂಗಾಗಿಹೋಗಿದ್ದರು. ಯಾವುದೇ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೂ ಸಿಕ್ಕಿ ಬೀಳದಂತಹ ಸ್ಥಳದಲ್ಲಿ ಹಣ ಇಡಲು ಮಾಡಿಕೊಂಡಿದ್ದ ಲಾಕರ್ ವ್ಯವಸ್ಥೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. 

ಜ.11ರಂದು ಕೋಗಿಲು ಕ್ರಾಸ್ ನಿವಾಸಿ ಉದ್ಯಮಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣ ಅವರನ್ನು ಆರೋಪಿಗಳು ಅವರ ಮನೆ ಸಮೀಪವೇ ಕಾರಿನಲ್ಲಿ ಅಪಹರಿಸಿದ್ದರು. ಉದ್ಯಮಿಯನ್ನು ಅಪಹರಿಸಿದ ಆರೋಪಿಗಳು ಮಲ್ಲಿಕಾರ್ಜುನ್ ಕುಟುಂಬಸ್ಥರಿಂದ 59ಲಕ್ಷ ಒತ್ತೆ ಹಣ ಪಡೆದಿದ್ದರು.

ಪ್ರಕರಣದಲ್ಲಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಅರ್ಷಿಯಾ, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಕಾಂತರಾಜ್ ಹಾಗೂ ಈತನ ಸಹಚರ ಪ್ರದೀಪ್‌ನನ್ನು ಪೊಲೀಸರು ಬಂಧಿಸಿದ್ದರು. ದಾಳಿ ವೇಳೆ ಆರೋಪಿಗಳ ಮನೆಯಲ್ಲಿ ಪೊಲೀಸರು ಒಟ್ಟು 1.4 ಕೋಟಿ ನಗದು ಜಪ್ತಿ ಮಾಡಿದ್ದರು. ಈ ಸಂದರ್ಭದಲ್ಲಿ ಅರ್ಷಿಯಾ ಮನೆಯಲ್ಲಿ ಲೆಕ್ಕ ವಿಲ್ಲದ 45 ಲಕ್ಷ ನಗದು ದೊರೆತಿತ್ತು. ಪ್ರಕರಣದಲ್ಲಿ ಅರ್ಷಿಯಾ ಬಂಧನವಾಗುತ್ತಿದ್ದಂತೆ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಹುದ್ದೆಯಿಂದ ಆಕೆಯನ್ನು ವಜಾಗೊಳಿಸಲಾಗಿತ್ತು.

Comments 0
Add Comment

    ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸುತ್ತಿರುವವರಿಗೆ ವಾಸ್ತವಾಂಶ ಬಿಚ್ಚಿಟ್ಟ ಪ್ರಧಾನ ಸಂಪಾದಕರು

    news | Saturday, May 26th, 2018