ಉತ್ತರ (ಸುರತ್ಕಲ್‌) ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮೊಹಿಯುದ್ದೀನ್‌ ಬಾವ ಇದೀಗ ಹಿಂದೂ ಮತಬ್ಯಾಂಕ್‌ಗಾಗಿ ಸಂಘ ಪರಿವಾರದ ಕಾರ್ಯಕ್ರಮಗಳಲ್ಲೇ ಕೇಸರಿ ಶಾಲು ಹೊದ್ದು ಕಾಣಿಸಿಕೊಳ್ಳುವ ಹೊಸ ತಂತ್ರ ಹೂಡಿದ್ದಾರೆ. ಈ ಫೊಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.
ಸಂದೀಪ್ ವಾಗ್ಲೆ ಮಂಗಳೂರು
ಮಂಗಳೂರು : ಉತ್ತರ (ಸುರತ್ಕಲ್) ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಹಿಯುದ್ದೀನ್ ಬಾವ ಇದೀಗ ಹಿಂದೂ ಮತಬ್ಯಾಂಕ್ಗಾಗಿ ಸಂಘ ಪರಿವಾರದ ಕಾರ್ಯಕ್ರಮಗಳಲ್ಲೇ ಕೇಸರಿ ಶಾಲು ಹೊದ್ದು ಕಾಣಿಸಿಕೊಳ್ಳುವ ಹೊಸ ತಂತ್ರ ಹೂಡಿದ್ದಾರೆ. ಈ ಫೊಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೇಸರಿ- ಹಸಿರು ಮಿಲನ: ಎರಡು ದಿನಗಳ ಹಿಂದೆ ಸುರತ್ಕಲ್ನ ಗುರುಪುರ ಕೈಕಂಬದಲ್ಲಿ ಹಿಂದೂ ಜಾಗರಣಾ ವೇದಿಕೆಯ ಸತ್ಯನಾರಾಯಣ ಪೂಜೆಗೆ ಕೇಸರಿ ಶಾಲು ಹೊದ್ದು ತೆರಳಿದ ಬಾವ, ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಕೆಲಕಾಲ ಅಲ್ಲೇ ಇದ್ದು ಸಂಘಟನೆಯ ಕಾರ್ಯಕರ್ತರೊಂದಿಗೆ ಹರಟಿದ್ದಾರೆ. ಇದಕ್ಕೆ ಸಂಘಟನೆ ಕಾರ್ಯಕರ್ತರೂ ಸಾಥ್ ನೀಡಿದ್ದು ವಿಶೇಷ. ಅಷ್ಟೇ ಅಲ್ಲ, ಕ್ಷೇತ್ರದಲ್ಲಿ ಎಲ್ಲೇ ಧಾರ್ಮಿಕ ಕಾರ್ಯಕ್ರಮ ಇದ್ದರೂ ಬಾವ ಅಲ್ಲಿ ಹಾಜರಿರುತ್ತಾರೆ.
ಬಾವ- ಬಿಜೆಪಿ ಭಾಯಿ ಭಾಯಿ: ಕೆಲ ದಿನಗಳ ಹಿಂದಷ್ಟೇ ಎಡಪದವಿನ ಸಮಾರಂಭದಲ್ಲಿ ಮಾತನಾಡಿದ್ದ ಬಾವ ‘ವಿಹಿಂಪ ಮುಖಂಡ ಎಂ.ಬಿ.ಪುರಾಣಿಕ್ ನನ್ನ ಸಹೋದರನಂತೆ. ದೆಹಲಿಗೆ ಹೋದರೆ ಸಂಸದ ನಳಿನ್ ಕುಮಾರ್ ಕಟೀಲು ಕೊಠಡಿಯಲ್ಲಿ ಉಳಿಯುತ್ತೇನೆ. ಬೆಂಗಳೂರಿಗೆ ಹೋದರೆ ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಅವರ ಮನೆಯಲ್ಲಿ ತಿಂಡಿ ಸೇವಿಸುತ್ತೇನೆ’ ಎಂದಿದ್ದರು. ಈ ಕುರಿತು ಬಿಜೆಪಿ ಸಂಸದ ನಳೀನ್ ಅವರನ್ನು ಪ್ರಶ್ನಿಸಿದರೆ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಿಂದುತ್ವದ ಅಲೆ ಜೋರಾಗಿದ್ದು 65 ಸಾವಿರ ಬಿಲ್ಲವರು, 25 ಸಾವಿರ ಬಂಟರು, 15 ಸಾವಿರ ಮೊಗವೀರರು ಇದ್ದಾರೆ. ಈ ಮತ ಸೆಳೆಯುವ ಲೆಕ್ಕಾಚಾರ ಬಾವ ಅವರದ್ದು.
ಶಾಸಕ ಬಾವ, ಕೇಸರಿ ಶಾಲು ಹೊದ್ದು ಫೋಸು ಕೊಡುವುದನ್ನೇ ಸೌಹಾರ್ದತೆ ಎಂದುಕೊಂಡಂತಿದೆ. ಇಷ್ಟುಅನ್ಯೋನ್ಯವಾಗಿರುವವರು ಹಿಂದೂ-ಮುಸ್ಲಿಮರನ್ನು ಎತ್ತಿಕಟ್ಟುವುದೇಕೆ? ಈ ಮೂಲಕ ಇಬ್ಬರದ್ದು ಶುದ್ಧ ವ್ಯಾಪಾರಿ ಮನೋಭಾವ ಎಂಬುದು ಸಾಬೀತಾಗಿದೆ.
- ಮುನೀರ್ ಕಾಟಿಪಳ್ಳ, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ.80ರಷ್ಟುಹಿಂದೂಗಳಿದ್ದು, ಹಿಂದೂ ಮತಗಳಿಂದಲೂ ನಾನು ಗೆದ್ದಿದ್ದೇನೆ. ವಿಹಿಂಪದವರು ಪೂಜೆಗೆ ಕರೆದಿದ್ದರಿಂದ ಹೋಗಿದ್ದೇನೆ. ನಾವು ಅನ್ಯೋನ್ಯವಾಗಿದ್ದೇವೆ ನೀವೇಕೆ ಕಚ್ಚಾಡುತ್ತೀರಿ ಎಂದು ಜನರಿಗೆ ಮನವಿ ಮಾಡಿದ್ದು ತಪ್ಪೇ?
ಮೊಹಿಯುದ್ದೀನ್ ಬಾವ, ಶಾಸಕರು
