ಪಾಕಿಸ್ತಾನದ ಜತೆ ಶಾಂತಿಯುತ ಸಂಬಂಧ ಹೊಂದುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟವಿದೆ. ಆದರೆ ದೇಶದ ಭದ್ರತೆಯನ್ನು ಬದಿಗೊತ್ತಿ ಅಂತಹ ಸಂಬಂಧ ಹೊಂದಲು ಅವರು ಸಿದ್ಧರಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್(ಅ.22): ಪಾಕಿಸ್ತಾನದ ಜತೆ ಶಾಂತಿಯುತ ಸಂಬಂಧ ಹೊಂದುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟವಿದೆ. ಆದರೆ ದೇಶದ ಭದ್ರತೆಯನ್ನು ಬದಿಗೊತ್ತಿ ಅಂತಹ ಸಂಬಂಧ ಹೊಂದಲು ಅವರು ಸಿದ್ಧರಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ವಿದೇಶಾಂಗ ಸಚಿವರಾಗಿ ಆಯ್ಕೆ ಯಾದ ಬಳಿಕ ಇದೇ ಮೊದಲ ಬಾರಿಗೆ ರೆಕ್ಸ್ ಟಿಲ್ಲರ್ ಸನ್ ಅವರು ಮುಂದಿನ ವಾರ ಭಾರತ ಭೇಟಿ ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯಾಕ್ಕೆ ಸಂಬಂಧಿ ಸಿದ ನೀತಿಗಳ ಕುರಿತು ಅರಿವು ಹೊಂದಿರುವ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಭಾರತ- ಪಾಕಿಸ್ತಾನ ಸಂಬಂಧ ಕುರಿತು ಪ್ರತಿಕ್ರಿಯಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಮಾತುಕತೆಗೆ ಕೂರಬೇಕು ಎಂಬುದು ಅಮೆರಿಕದ ಹೆಬ್ಬಯಕೆ. ಎರಡೂ ದೇಶಗಳು ಮಾತುಕತೆ ನಡೆಸಿ, ವಿಶ್ವಾಸ ವೃದ್ಧಿಸಿಕೊಂಡು ಪ್ರಾದೇಶಿಕ ಭದ್ರತೆ ಹಾಗೂ ಸ್ಥಿರತೆಯ ಹಾದಿಯತ್ತ ನಡೆಯುವುದು ಅತ್ಯಂತ ಮಹತ್ವ. ಇದರಿಂದ ಎರಡೂ ದೇಶಗಳು ಹಿಂದೆಂದೂ ಕಾಣದ ಅಭಿವೃದ್ಧಿಮಟ್ಟ ತಲುಪುತ್ತವೆ ಎಂದಿದ್ದಾರೆ.

ವಾಣಿಜ್ಯ ಸಂಬಂಧ ಮರು ಆರಂಭಿಸಲು ನವದೆಹಲಿ ಜತೆ ವಿಶ್ವಾಸ ವೃದ್ಧಿಸಿಕೊಳ್ಳುವುದು ಪಾಕಿಸ್ತಾನದ ಹಿತದೃಷ್ಟಿಯಿಂದ ಒಳ್ಳೆಯದು. ಪಠಾಣ್‌'ಕೋಟ್ ದಾಳಿ ಸೇರಿದಂತೆ ಹಲವು ವಿಚಾರಗಳಲ್ಲಿ ಹಿನ್ನಡೆಯಾಗಿದ್ದರಿಂದ ಭಯೋತ್ಪಾದ ಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ಪಾಕ್ ಜತೆ ಮಾತುಕತೆ ಇಲ್ಲ ಎಂದು ಭಾರತ ನಿರ್ಧಾರ ಕೈಗೊಂಡಿದೆ. ಮಾತುಕತೆ ಹಾಗೂ ಭಯೋತ್ಪಾದನೆ ಎರಡೂ ಒಟ್ಟಿಗೆ ಸಾಗದು ಎಂಬುದು ಭಾರತ ನೀತಿ ಎಂದಿದ್ದಾರೆ.