ಐಟಿ ಅಧಿಕಾರಿಗಳು ಗ್ರಾಹಕರ ಸೋಗಿನಲ್ಲಿ ಬ್ಯಾಂಕಿಗೆ ಹೋಗಿ ಈ ಸ್ಟಿಂಗ್ ಆಪರೇಷನ್ ಮಾಡಿದ್ದಾರೆನ್ನಲಾಗಿದೆ. ಇಂತಹ 500 ಸಿಡಿಗಳು ಹಣಕಾಸು ಸಚಿವಾಲಯವನ್ನು ತಲುಪಿವೆಯಂತೆ.
ನವದೆಹಲಿ: ನೋಟು ನಿಷೇಧ ಮಾಡಿ ನೋಟು ಹಿಂತೆಗೆತಕ್ಕೆ ಪರಿಮಿತಿ ಹೇರಿದ್ದರೂ ಹಲವು ಕಡೆ ಕಂತೆಕಂತೆ ನಗದು ಹಣ ಪತ್ತೆಯಾದ ಘಟನೆಗಳು ಬೆಳಕಿಗೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಾಳಧನಿಕರು ಭ್ರಷ್ಟ ಬ್ಯಾಂಕ್ ಅಧಿಕಾರಿಗಳ ಮೂಲಕ ಕಪ್ಪುಹಣವನ್ನು ಬಿಳಿ ಮಾಡುತ್ತಿರುವುದಲ್ಲದೇ, ಕೋಟಿಗಟ್ಟಲೆ ನಗದು ಹಣವನ್ನು ತಮ್ಮ ಮನೆಗಳಲ್ಲಿ ಮತ್ತೆ ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ಕಷ್ಟ ತಮಗಷ್ಟೇ, ಉಳ್ಳವರು ನೆಮ್ಮದಿಯಾಗಿದ್ದಾರೆಂದು ಭಾವಿಸತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಡಿ.10ರಂದು ಗುಜರಾತ್'ನ ದೀಸಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಗಮನಾರ್ಹವೆನಿಸಿದೆ.
ಅಮುಲ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ರೈತರನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಬ್ಯಾಂಕ್ ಅಧಿಕಾರಿಗಳ ಮೇಲೆ ಕಣ್ಣಿಟ್ಟಿರುವುದರ ಸುಳಿವು ನೀಡಿದರು.
"ನಗದು ನಿಷೇಧವು ದೇಶದಲ್ಲಿ ಭ್ರಷ್ಟಾಚಾರವನ್ನು ನೀಗಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈಚಿನ ದಿನಗಳಲ್ಲಿ ಸರಕಾರವು ಭ್ರಷ್ಟರ ಬೆನ್ನುಬಿದ್ದಿರುವುದನ್ನು ನೀವು ನೋಡಿರುತ್ತೀರಿ. ಬ್ಯಾಂಕ್ ಅಧಿಕಾರಿಗಳು ಜೈಲಿಗೆ ಹೋಗಲಿದ್ದಾರೆ. ಕಂತೆಗಟ್ಟಲೆ ನಗದು ಹಣದೊಂದಿಗೆ ಓಡಿಹೋದ ಜನರು ಜೈಲು ಸೇರಲಿದ್ದಾರೆ. ಮೋದಿಜೀ 1000 ಮತ್ತು 50 ರೂಪಾಯಿ ನಿಷೇಧಿಸಿದರೆ, ತಾವು ಹಿಂಬಾಗಿಲ ಮೂಲಕ ಏನಾದರೂ ಮಾಡಬಹುದೆಂದು ಅವರು ಭಾವಿಸಿದ್ದರು. ಆದರೆ, ಹಿಂಬಾಗಿಲಿನಲ್ಲಿ ಕ್ಯಾಮೆರಾ ಇಟ್ಟಿರುವುದು ಅವರಿಗೆ ಗೊತ್ತಾಗಿಲ್ಲ. ಎಲ್ಲರೂ ಸಿಕ್ಕಿಬೀಳುತ್ತಾರೆ. ಯಾರೂ ಬಚಾವಾಗುವುದಿಲ್ಲ... ಎರಡು ತಿಂಗಳು, ಮೂರು ತಿಂಗಳು, ಆರು ತಿಂಗಳು... ನ.8ರ ನಂತರ ಯಾರಾರೂ ತಪ್ಪು ಮಾಡಿದ್ದಾರೋ ಯಾರನ್ನೂ ಉಳಿಸುವುದಿಲ್ಲ. ಎಲ್ಲರೂ ಶಿಕ್ಷೆಗೆ ಗುರಿಯಾಗಬೇಕು. 125 ಕೋಟಿ ಜನರ ಕನಸನ್ನು ಭಗ್ನ ಮಾಡಲು ಯತ್ನಿಸಿದವರಿಗೆ ತಕ್ಕ ಶಾಸ್ತಿಯಾಗುತ್ತದೆ ಎಂದು ದೇಶದ ಜನತೆಗೆ ತಿಳಿಸಲು ಇಷ್ಟಪಡುತ್ತೇವೆ" ಎಂದು ಪ್ರಧಾನಿಗಳು ಮೊನ್ನೆ ಗುಡುಗಿದ್ದರು.
ಕೇಂದ್ರ ಸರಕಾರದ ಮೂಲಗಳ ಪ್ರಕಾರ, ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ಭ್ರಷ್ಟರು ತಮ್ಮ ಕಳ್ಳದುಡ್ಡನ್ನು ವಿನಿಯಮ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ರಹಸ್ಯವಾಗಿ ಸೆರೆಹಿಡಿಯಲಾಗಿದೆ. ಐಟಿ ಅಧಿಕಾರಿಗಳು ಗ್ರಾಹಕರ ಸೋಗಿನಲ್ಲಿ ಬ್ಯಾಂಕಿಗೆ ಹೋಗಿ ಈ ಸ್ಟಿಂಗ್ ಆಪರೇಷನ್ ಮಾಡಿದ್ದಾರೆನ್ನಲಾಗಿದೆ. ಇಂತಹ 500 ಸಿಡಿಗಳು ಹಣಕಾಸು ಸಚಿವಾಲಯವನ್ನು ತಲುಪಿವೆಯಂತೆ.
