ನವದೆಹಲಿ, (ಮಾ.22): ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. 

ಕೊರೋನಾ ಒದ್ದು ಓಡಿಸಲು ಪಕ್ಷಾತೀತವಾಗಿ ಹೋರಾಟಗಳು ನಡೆಯುತ್ತಿವೆ. ಅದರಂತೆ ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ ಇಡೀ ದೇಶ ಇಂದು ಜನತಾ ಕರ್ಫ್ಯೂ ಆಚರಿಸಿದೆ. 

ಅಲ್ಲದೇ ಪ್ರಧಾನಿ ಮೋದಿ ಅವರ ಕರೆಯಂತೆ ತಮ್ಮ ತಮ್ಮ ಮನೆಯಿಂದಲೇ ಕೊರೊನಾ ವಿರುದ್ಧ ಅತ್ಯಂತ ಧೈರ್ಯವಾಗಿ ಹೋರಾಡುತ್ತಿರುವ ದೇಶದ ವೈದ್ಯ ಸಮುದಾಯಕ್ಕೆ ಇಡೀ ದೇಶ ಕೃತಜ್ಷತೆ ಸಲ್ಲಿಸಿದೆ.

ಚಪ್ಪಾಳೆಯ ಕೃತಜ್ಞತೆ; ಕೊರೋನಾ ವಿರುದ್ಧ ಹೋರಾಟಕ್ಕೆ ಮಿಡಿದ ಭಾರತ!

ದೇಶಾದ್ಯಂತ ಬಹುತೇಕ ನಾಗರಿಕರು ತಮ್ಮ ತಮ್ಮ ಮನೆಗಳ ಮಹಿಡಿ ಮೇಲೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಹಾಗೂ ಗಂಟೆ ಬಾರಿಸುವ ಮೂಲಕ ವೈದ್ಯ ಸಮುದಾಯಕ್ಕೆ ಧನ್ಯವಾದ ಅರ್ಪಸಿದರು.

ದೇಶದ ಪ್ರಮುಖ ನಗರಗಳಲ್ಲಿ ತಮ್ಮ ತಮ್ಮ ಮನೆಯಿಂದ ಹೊರ ಬಂದ ನಾಗರಿಕರು, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ವೈದ್ಯರ ಮನೋಸ್ಥೈರ್ಯವನ್ನು ಹೆಚ್ಚಿಸಿದರು.

ಜನರಿಗೆ ಮೋದಿ ಧನ್ಯವಾದ
ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದರಿಂದ  ದೇಶದ ಜನತೆಗೆ ಧನ್ಯವಾದ ಹೇಳಿರುವ ಪ್ರಧಾನಿ ಮೋದಿ, ಜನತಾ ಕರ್ಫ್ಯೂ ಯಶಸ್ಸಿಗೆ ತುಂಬ ಸಂತಸವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಜಾರಿಗೊಳಿಸಲಾಗಿದ್ದ 14 ತಾಸುಗಳ ಜನತಾ ಕರ್ಫ್ಯೂ ಕೊರೋನಾವೈರಸ್ ವಿರುದ್ಧದ ಸಮರದ ಆರಂಭ ಮಾತ್ರ,  ಯಾವುದೇ ಸವಾಲ್ ಗಳನ್ನು ಒಗ್ಗಟ್ಟಾಗಿ ಸೋಲಿಸುವುದಾಗಿ ದೇಶವಾಸಿಗಳು ಸಾಕ್ಷಿಕರಿಸಿದ್ದಾರೆ.  ಇಂದಿನ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಕ್ತಾಯವಾಗಲಿದೆ. ಆದರೆ, ಹಾಗೆಂದ ಮಾತ್ರ ಸಂಭ್ರಮಾಚರಣೆ ಪಡಬೇಕಿಲ್ಲ ಎಂದಿದ್ದಾರೆ.