ತನ್ನೂರಿನ ರಸ್ತೆಯಲ್ಲಿದ್ದ ರೈಲ್ವೆ ಗೇಟ್‌ನಿಂದಾಗಿ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ಆರನೇ ತರಗತಿ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮೇಲ್ಸೇತುವೆ ನಿರ್ಮಿಸಲು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಪ್ರಧಾನಿ ಕಚೇರಿ, ಕ್ರಮಕ್ಕಾಗಿ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದೆ.
ಮೂಲತಃ ಪುತ್ತೂರಿನ, ಕಿನ್ನಿಗೋಳಿ ಸಮೀಪದ ಪದ್ಮನೂರಿನ ನಿವಾಸಿಗಳಾದ ರಮೇಶ್ ಕುಲಾಲ್-ಕುಸುಮಾ ದಂಪತಿ ಪುತ್ರಿ, ಮೂಲ್ಕಿ ಸಮೀಪದ ಶಾರದಾ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ‘ಧೃತಿ' ಪತ್ರ ಬರೆದ ಬಾಲಕಿ.
ಕಿನ್ನಿಗೋಳಿ-ಮಂಗಳೂರು ಮುಖ್ಯ ರಸ್ತೆಯ ಹಳೆಯಂಗಡಿಯ ಇಂದಿರಾನಗರ ಬಳಿ ರೈಲ್ವೆಗೇಟ್ ನಿರ್ಮಿಸಲಾಗಿದ್ದು, ಪದೇ ಪದೇ ಗೇಟ್ ಹಾಕುತ್ತಿದ್ದರಿಂದ ಸಾಕಷ್ಟುತೊಂದರೆಯಾಗಿತ್ತು. ಈ ರೈಲ್ವೆ ಗೇಟ್ ಹಾಕಿದ್ದರಿಂದ ಆ್ಯಂಬುಲೆನ್ಸ್ನಲ್ಲಿದ್ದ ಗರ್ಭಿಣಿಯೊಬ್ಬರಿಗೆ ತೊಂದರೆಯಾಗಿದ್ದನ್ನು ಕಂಡಿದ್ದ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಹಸ್ತಾಕ್ಷರದಲ್ಲೇ 3 ಪುಟಗಳ ಪತ್ರ ಬರೆದಿದ್ದಳು.
ಪ್ರಧಾನಿ ಕಚೇರಿಯಿಂದ ಸೂಚನೆ ಬಂದೊಡನೆ ರೈಲ್ವೆ ಅಧಿಕಾರಿಗಳು ಧೃತಿ ತಂದೆ ರಮೇಶ್ ಕುಲಾಲ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿರುವ ಬಗ್ಗೆ ಮರು ಪತ್ರವನ್ನೂ ಬರೆದಿದ್ದಾರೆ. ಹಳೆಯಂಗಡಿ ಇಂದಿರಾನಗರ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ಇದಕ್ಕೆ ರೂ. 4.56 ಕೋಟಿ ವೆಚ್ಚ ತಗುಲಲಿದೆ. ಯೋಜನೆಗೆ ಸಹಕರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾಳೆ.
