ಕಲಬುರಗಿ[ಮಾ.06]: ಹುಬ್ಬಳ್ಳಿ ಸಮಾವೇಶದ ಮೂಲಕ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಈಗಾಗಲೇ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ‘ಕಾಂಗ್ರೆಸ್‌ನ ಭದ್ರಕೋಟೆ’ ಕಲಬುರಗಿಯಲ್ಲಿ ಬೃಹತ್‌ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಅವರು, ಬೆಂಗಳೂರಿನ ಇಎಸ್‌ಐಸಿ ಮೆಡಿಕಲ್‌ ಕಾಲೇಜಿಗೆ ಶಂಕುಸ್ಥಾಪನೆ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಟರ್ಮಿನಲ್‌ ಉದ್ಘಾಟನೆ ಸೇರಿ ಕೇಂದ್ರ ಸರ್ಕಾರದ ಐದು ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜತೆಗೆ, ಕಲಬುರಗಿಯ ಆಯುಷ್ಮಾನ್‌ ಭಾರತ ಯೋಜನೆ ಫಲಾನುಭವಿಗಳೊಂದಿಗೂ ಸಂವಾದ ನಡೆಸಲಿದ್ದಾರೆ.

‘ಸೋಲಿಲ್ಲದ ಸರದಾರ’, ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರದಲ್ಲಿ ಈ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದು, ಈಗಾಗಲೇ ಅಗತ್ಯ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಬೆಳಗ್ಗೆ 11.35ಕ್ಕೆ ಆರಂಭವಾಗಲಿರುವ ಈ ಸಮಾವೇಶಕ್ಕೆ 3 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.

ಹೈಕ ಜನಸಾಗರ ನಿರೀಕ್ಷೆ:

ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ನೂತನ ವಿದ್ಯಾಲಯ ಮೈದಾನದಲ್ಲಿ ರ‍್ಯಾಲಿಗಾಗಿ ವೇದಿಕೆ ನಿರ್ಮಿಸಲಾಗಿದ್ದು, ಮಧ್ಯಾಹ್ನದ ಬಿರು ಬಿಸಿಲಲ್ಲೇ ಮೋದಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿಯಿಂದ ಮೋದಿ ರಾರ‍ಯಲಿಗಾಗಿ ಜನಸಾಗರ ಹರಿದು ಬರುವ ನಿರೀಕ್ಷೆ ಇದೆ. ರಾರ‍ಯಲಿ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಸ್ವಾಗತ ಕೋರುವ ಬ್ಯಾನರ್‌, ಕಟೌಟ್‌ಗಳು, ಬಿಜೆಪಿಯ ಧ್ವಜಗಳನ್ನು ಹಾಕಲಾಗಿದೆ. ಇದರಿಂದ ಇಡೀ ನಗರ ಕೇಸರಿಮಯವಾಗಿ ಕಾಣಿಸುತ್ತಿದೆ.

ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತ 2 ಬಾರಿ ಗೆದ್ದು, ಸಂಸತ್ತಿನಲ್ಲಿ ಕಾಂಗ್ರೆಸ್‌ ಸಂಸದೀಯ ಗುಂಪಿನ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಇದೇ ಕ್ಷೇತ್ರದಲ್ಲಿ ಮೋದಿ ರಾರ‍ಯಲಿ ಆಯೋಜಿಸಿದ್ದು, ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಉಮೇಶ್‌ ಜಾಧವ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಖರ್ಗೆ ವಿರುದ್ಧವಾಗಿ ಕಣಕ್ಕಿಳಿಸುವ ಘೋಷಣೆಯನ್ನೂ ಮೋದಿ ಈ ಸಂದರ್ಭದಲ್ಲಿ ಮಾಡುವ ನಿರೀಕ್ಷೆ ಇದೆ.

ಸರ್ಕಾರಿ ಕಾರ್ಯಕ್ರಮಕ್ಕೆ ಪ್ರತ್ಯೇಕ ವೇದಿಕೆ

ಪ್ರಧಾನಿ ಮೋದಿ ಅವರು ಚುನಾವಣಾ ಭಾಷಣಕ್ಕೂ ಮುನ್ನ ಮೋದಿ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಯೋಜನೆ ಲೋಕಾರ್ಪಣೆಗಾಗಿಯೇ ಹುಬ್ಬಳ್ಳಿಯಲ್ಲಿ ಮಾಡಿದಂತೆ ಕಲಬುರಗಿಯಲ್ಲೂ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದೆ. ಆ ನಂತರ ಮುಖ್ಯವೇದಿಕೆಗೆ ತೆರಳಲಿರುವ ಮೋದಿ ಅವರು ಚುನಾವಣಾ ಭಾಷಣ ಮಾಡಲಿದ್ದಾರೆ.

ಯಾವ್ಯಾವ ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ?

1 ಬೆಂಗಳೂರಿನ ಇಎಸ್‌ಐಸಿ ಮೆಡಿಕಲ್‌ ಕಾಲೇಜು-ಆಸ್ಪತ್ರೆಗೆ ಶಂಕುಸ್ಥಾಪನೆ

2 ಕಿಮ್ಸ್‌ ಹುಬ್ಬಳ್ಳಿ ಸೂಪರ್‌ ಸ್ಪೇಷಾಲಿಟಿ ಶಾಖೆ ಲೋಕಾರ್ಪಣೆ

3 ರಾಯಚೂರಲ್ಲಿ ರಿಸೈಟ್‌ಮೆಂಟ್‌ ಆಫ್‌ ಬಿಪಿಸಿಎಲ್‌ ಡಿಪೋಗೆ ಚಾಲನೆ

4 ಬೆಂಗಳೂರಿನ ಇನ್‌ಕಮ್‌ ಟ್ಯಾಕ್ಸ್‌ ಅಪೆಲ್ಲೆಟ್‌ ಟ್ರಿಬ್ಯುನಲ್‌ ಟರ್ಮಿನಲ್‌ ಲೋಕಾರ್ಪಣೆ

5 ಬೆಂಗಳೂರು ವಿವಿಯಲ್ಲಿ ಈಶಾನ್ಯ ಭಾರತದ ವಿದ್ಯಾರ್ಥಿನಿಯರಿಗಾಗಿ ಮಹಿಳಾ ಹಾಸ್ಟೆಲ್‌ ಉದ್ಘಾಟನೆ

6 ಆಯುಷ್ಮಾನ್‌ ಭಾರತ ಕಲಬುರಗಿ ಫಲಾನುಭವಿಗಳೊಂದಿಗೆ ಸಂವಾದ

ಪ್ರಧಾನಿ ಮೋದಿ ಕಲಬುರಗಿಯಲ್ಲಿನ ಕಾರ್ಯಕ್ರಮದ ವೇಳಾಪಟ್ಟಿ

ಬೆ. 10.50- ಬೀದರ್‌ ವಾಯುನೆಲೆಗೆ ಆಗಮನ

ಬೆ. 11.35 - ಬೀದರ್‌ನಿಂದ ವಾಯುಪಡೆ ಹೆಲಿಕಾಪ್ಟರ್‌ ಮೂಲಕ ಕಲಬುರಗಿ ಆಗಮನ

ಬೆ. 11.45- ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿ

ಮ. 12. 15- ಬಿಜೆಪಿ ಆಯೋಜಿಸಿರುವ ಬಹಿರಂಗ ರಾರ‍ಯಲಿ ವೇದಿಕೆಗೆ ಆಗಮನ

ಮ. 13. 05- ಕಲಬುರಗಿಯಿಂದ ಕಾಪ್ಟರ್‌ ಮೂಲಕ ವಾಪಸ್‌