100 ಪ್ರಭಾವಿ ವ್ಯಕ್ತಿಗಳ ಸ್ಪರ್ಧೆಯಲ್ಲಿ ಪ್ರಧಾನಿ ಮೋದಿ

First Published 30, Mar 2018, 10:35 AM IST
Modi Paytm Founder among Times 100 most Influential people
Highlights

ಅಮೆರಿಕ ಮೂಲದ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್‌ನ ಸಮಕಾಲೀನ ಜಗತ್ತಿನ ಮೇಲೆ ತೀವ್ರ ಪ್ರಭಾವ ಬೀರಿರುವ 100 ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿ ಆಯ್ಕೆಯಾಗುವ ಸ್ಪರ್ಧಿಗಳ ಪಟ್ಟಿ ಬಿಡುಗಡೆಯಾಗಿದೆ.

ನ್ಯೂಯಾರ್ಕ್: ಅಮೆರಿಕ ಮೂಲದ ಪ್ರತಿಷ್ಠಿತ ‘ಟೈಮ್’ ಮ್ಯಾಗಜಿನ್‌ನ ಸಮಕಾಲೀನ ಜಗತ್ತಿನ ಮೇಲೆ ತೀವ್ರ ಪ್ರಭಾವ ಬೀರಿರುವ 100 ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿ ಆಯ್ಕೆಯಾಗುವ ಸ್ಪರ್ಧಿಗಳ ಪಟ್ಟಿ ಬಿಡುಗಡೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಮೈಕ್ರೋಸಾಫ್ಟ್‌ನ ಭಾರತೀಯ ಮೂಲದ ಸಿಇಒ ಸತ್ಯ ನಾಡೆಲ್ಲಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮುಂತಾದ ಪ್ರಮುಖರು ಸ್ಪರ್ಧೆಯಲ್ಲಿದ್ದಾರೆ.

2015ರಲ್ಲಿ 100 ಮಂದಿ ಪ್ರಭಾವಿಗಳ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಮೋದಿ, 2016, 2017ರ ಪಟ್ಟಿಯಲ್ಲಿ ಸಂಭಾವ್ಯರ ಪಟ್ಟಿಯಲ್ಲಿದ್ದರು. ಈ ವರ್ಷದ ಪಟ್ಟಿಯಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್, ಟ್ರಂಪ್ ಮಗಳು ಇವಾಂಕಾ ಟ್ರಂಪ್, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮುಂತಾದ ಪ್ರಮುಖರೂ ಇದ್ದಾರೆ.

ಯಾರು ಪ್ರಭಾವಿ ವ್ಯಕ್ತಿಗಳು ಎಂದು ಗುರುತಿಸಿ ಮತದಾನ ಮಾಡುವಂತೆ, ‘ಟೈಮ್’ ನಿಯತಕಾಲಿಕೆ ಆನ್‌ಲೈನ್ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಈ ಮತದಾನದ ಫಲಿತಾಂಶ ಮತ್ತು ‘ಟೈಮ್’ ಮ್ಯಾಗಜಿನ್ ಸಂಪಾದಕೀಯ ಬಳಗ ಅಂತಿಮ ನಿರ್ಣಯ ಕೈಗೊಳ್ಳಲಿದೆ.

ಬುಧವಾರ ಆನ್‌ಲೈನ್ ಮತದಾನ ಆರಂಭವಾಗಿದ್ದು, ಏ.17ರಂದು ಮತದಾನ ಕೊನೆಗೊಳ್ಳಲಿದ್ದು, ಏ.19ರಂದು ಫಲಿತಾಂಶ ಪ್ರಕಟವಾಗಲಿದೆ. ಜಗತ್ತಿನ ಪ್ರಮುಖ ಕಲಾವಿದರು, ನಾಯಕರು, ವಿಜ್ಞಾನಿಗಳು, ಕಾರ್ಯಕರ್ತರು, ಉದ್ಯಮಿಗಳನ್ನು ಒಳಗೊಂಡ 100  ಜನ ಪ್ರಭಾವಿಗಳ ವಾರ್ಷಿಕ ಪಟ್ಟಿಯನ್ನು ‘ಟೈಮ್’ ದಶಕಗಳಿಂದ ಪ್ರಕಟಿಸುತ್ತಿದೆ.

loader