ನವದೆಹಲಿ[ಜೂ.11]: ಲೋಕಸಭಾ ಚುನಾವಣಾ ಪ್ರಚಾರದ ವೇಳೆ 'ನಾ ಖಾವೂಂಗಾ, ನಾ ಖಾನೆ ದೂಂಗಾ' ಎನ್ನುವ ಘೋಷಣೆ ಮೂಲಕ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದಿದ್ದರು. ಇದೀಗ ತಮ್ಮ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಆರಂಭಿಸಿದ್ದಾರೆ. ಮೊದಲ ಹೆಜ್ಜೆ ಎಂಬಂತೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲು ಆದೇಶ ಹೊರಡಿಸಿದ್ದಾರೆ.

ವೃತ್ತಿಗೆ ಸಂಬಂಧಪಟ್ಟಂತೆ ದುರ್ವರ್ತನೆ, ಭ್ರಷ್ಟಾಚಾರದ ಆರೋಪದಲ್ಲಿ ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲಾಗಿದ್ದು, ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿಗಳೂ ಅಮಾನತ್ತುಗೊಂಡಿದ್ದಾರೆ. ಭ್ರಷ್ಟಾಚಾರ ಹಾಗೂ ಉದ್ಯಮಿಗಳಿಂದ ಸುಲಿಗೆ ಆರೋಪಗಳು ಈ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದ್ದವು. 

ಭ್ರಷ್ಟಾಚಾರ ಆರೋಪ ಹೊತ್ತು ಸಿಬಿಐ ತನಿಖೆ ಎದುರಿಸುತ್ತಿದ್ದ ಮತ್ತು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿಂತೆ 2009 ರಲ್ಲೇ ಅಮಾನತುಗೊಂಡಿದ್ದ ಆದಾಯ ತೆರಿಗೆ ಆಯುಕ್ತರೊಬ್ಬರನ್ನೂ ಕೇಂದ್ರ ಸರ್ಕಾರ ವಜಾಗೊಳಿಸಿದೆ. ಈ ಅಧಿಕಾರಿಗಳ ಪೈಕಿ IRS ಅಧಿಕಾರಿಯೂ ಇದ್ದಾರೆ. ಇವರು ಕುಟುಂಬ ಸದಸ್ಯರು ಹಾಗೂ ತನ್ನ ಹೆಸರಿನಲ್ಲಿ ಸುಮಾರು 3.17 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು.