ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ನಿರಂತರವಾಗಿ ಆರೋಪ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸ್ವಕ್ಷೇತ್ರ ಅಮೇಠಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಫಲ್‌ ಯೋಜನೆಯೊಂದನ್ನು ಉಡುಗೊರೆಯಾಗಿ ನೀಡಿದೆ. 

ಅಮೇಠಿ ಕ್ಷೇತ್ರ ವ್ಯಾಪ್ತಿಯ ಕೊರ್ವಾದಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ರಷ್ಯಾ ಸಹಭಾಗಿತ್ವದೊಂದಿಗೆ 7.5 ಲಕ್ಷ ಕಲಾಶ್ನಿಕೋವ್‌ ರೈಫಲ್‌ಗಳನ್ನು ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ.

ಈ ಕುರಿತಾದ ಒಪ್ಪಂದಕ್ಕೆ ಭಾರತ ಹಾಗೂ ರಷ್ಯಾ ದೇಶಗಳು ಶುಕ್ರವಾರ ಸಹಿ ಹಾಕುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಅವರು ಅಮೇಠಿಗೆ ತೆರಳಿ ಫೆ.28ರಂದು ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಎಕೆ-203 ರೈಫಲ್‌ಗಳನ್ನು ಉತ್ಪಾದಿಸುವ 12 ಸಾವಿರ ಕೋಟಿ ರು. ವೆಚ್ಚದ ಯೋಜನೆ ಇದಾಗಿದ್ದು, ಇದರ ಯಶಸ್ವಿ ಅನುಷ್ಠಾನಕ್ಕಾಗಿ ಸೇನೆಯ ಮೇಜರ್‌ ಜನರಲ್‌ ಅವರೇ ನೇತೃತ್ವ ಹೊತ್ತುಕೊಳ್ಳಲಿದ್ದಾರೆ. ಅಮೇಠಿಯಲ್ಲಿ ಉತ್ಪಾದನೆಯಾಗುವ ರೈಫಲ್‌ಗಳನ್ನು ವಿದೇಶಗಳಿಗೂ ರಫ್ತು ಮಾಡುವ ಉದ್ದೇಶ ಎರಡೂ ದೇಶಗಳಿಗೆ ಇದೆ ಎಂದು ಮೂಲಗಳು ತಿಳಿಸಿವೆ.