ಕರ್ನಾಟಕದ ನೆಲ, ಜಲ, ಭಾಷೆ ಯಾವುದೇ ವಿಷಯದಲ್ಲೂ ಕೇಂದ್ರವು ಬೆಂಬಲಕ್ಕೆ ನಿಂತೇ ಇಲ್ಲ. ಇದ್ಯಾವ ಸೀಮೆ ನ್ಯಾಯ ಸ್ವಾಮಿ?

ಬೆಂಗಳೂರು(ಜ. 20): ಜಲ್ಲಿಕಟ್ಟು ಆಚರಣೆ ವಿಚಾರದಲ್ಲಿ ಕೇಂದ್ರ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಕನ್ನಡಿಗರಿಗೆ ಒಂದು ಪಾಠದಂತಿದೆ. ತಮಿಳುನಾಡು ಮತ್ತು ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರಕಾರ ಒಂದಕ್ಕೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ ಎಂಬ ತಂತ್ರ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಕರ್ನಾಟಕದ ನೆಲ, ಜಲ, ಭಾಷೆ ಯಾವುದೇ ವಿಷಯದಲ್ಲೂ ಕೇಂದ್ರವು ಬೆಂಬಲಕ್ಕೆ ನಿಂತೇ ಇಲ್ಲ. ಇದ್ಯಾವ ಸೀಮೆ ನ್ಯಾಯ ಸ್ವಾಮಿ?

ಎಲ್ಲೆಲ್ಲಿ ಭೇದಭಾವ?

1) ಕಾಲಕಾಲಕ್ಕೆ ತಮಿಳುನಾಡು ಮಾಡಿಕೊಂಡು ಬರುವ ಬಹುತೇಕ ಎಲ್ಲಾ ಆಗ್ರಹಗಳಿಗೂ ಕೇಂದ್ರ ಸರಕಾರ ಮಣಿಯುತ್ತಾ ಬಂದಿದೆ. ಜಲ್ಲಿಕಟ್ಟು ವಿಚಾರದಲ್ಲಿ ಇದು ಇನ್ನೂ ಸ್ಪಷ್ಟ. ಆದರೆ, ಕಾವೇರಿ ವಿಷಯದಲ್ಲಿ ಇಡೀ ಕನ್ನಡಿಗರು ಒಂದಾಗಿ ಪ್ರತಿಭಟನೆ ಮಾಡಿದರೂ ಕೇಂದ್ರದ ಕಿವಿಗದು ತಾಕಲೇ ಇಲ್ಲ.

2) ರಾಜ್ಯದ ಕಾವೇರಿ ನೀರಿನ ಯಾವುದೇ ಜಲಾಶಯಗಳಲ್ಲೂ ಕುಡಿಯಲೇ ನೀರಿಲ್ಲ ಎಂಬಂತಹ ಸ್ಥಿತಿ ಸ್ಪಷ್ಟವಾಗಿ ತೋರುತ್ತಿದ್ದರೂ ಕೇಂದ್ರ ಸರಕಾರಕ್ಕೆ ಜಾಣಕುರುಡುತನ ಪ್ರದರ್ಶನ ಮಾಡಿದೆ.

3) ಕಾವೇರಿಯಷ್ಟೇ ಅಲ್ಲ ಮಹದಾಯಿ ನೀರಿನ ವಿಚಾರದಲ್ಲೂ ಕರ್ನಾಟಕದತ್ತ ಕೇಂದ್ರ ಮಲತಾಯಿ ಧೋರಣೆ ಅನುಸರಿಸಿದ್ದು ಎಲ್ಲರಿಗೂ ಗೊತ್ತಿರುವುದೇ.

4) ತಮಿಳುನಾಡು ಸಿಎಂ ಪನ್ನೀರ್'ಸೆಲ್ವಂ ಕಳೆದ 45 ದಿನಗಳಲ್ಲಿ 4 ಬಾರಿ ಪ್ರಧಾನಿಯನ್ನು ಭೇಟಿಯಾಗಿದ್ದಾರೆ. ಆದರೆ, ಸಿದ್ದರಾಮಯ್ಯ 5 ಬಾರಿ ಮೋದಿ ಭೇಟಿಗೆ ಅಂಗಲಾಚಿದರೂ ಕ್ಯಾರೇ ಅನ್ನಲಿಲ್ಲ. ಸಿದ್ದರಾಮಯ್ಯ ಬರೆದ 7 ಪತ್ರಗಳಿಗೆ ಮೋದಿಯದ್ದು ನೋ ಆನ್ಸರ್.

5) ಬರ ಪರಿಹಾರ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯನವರ ಭೇಟಿಗೆ ಮೋದಿ ಸಮಯವನ್ನೇ ನೀಡಿರಲಿಲ್ಲ. ಪನ್ನೀರ್'ಸೆಲ್ವಂ ಇಚ್ಛಿಸಿದಾಗೆಲ್ಲಾ ಮೋದಿಯನ್ನು ಭೇಟಿ ಮಾಡಿಕೊಂಡು ಬರುತ್ತಾರೆ.