Asianet Suvarna News Asianet Suvarna News

ಯುಜಿಸಿ ರದ್ದು ಮಾಡಲು ಹೊರಟ ಮೋದಿ ಸರ್ಕಾರದ ಮುಂದಿನ ಪ್ಲಾನ್ ಏನು..?

ಅಧಿಕಾರಕ್ಕೆ ಬರುತ್ತಿದ್ದಂತೆ ನೆಹರು ಕಾಲದ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗ ಅಸ್ತಿತ್ವಕ್ಕೆ ತಂದಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ವಿಶ್ವವಿದ್ಯಾಲಯ ಧನ ಸಹಾಯ (ಯುಜಿಸಿ) ರದ್ದುಗೊಳಿಸಿ ಹೊಸ ಸಂಸ್ಥೆ ಸೃಷ್ಟಿಸಲು ಮುಂದಾಗಿದೆ.

Modi Government Seeks to Overhaul UGC

ನವದೆಹಲಿ: ಅಧಿಕಾರಕ್ಕೆ ಬರುತ್ತಿದ್ದಂತೆ ನೆಹರು ಕಾಲದ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗ ಅಸ್ತಿತ್ವಕ್ಕೆ ತಂದಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ವಿಶ್ವವಿದ್ಯಾಲಯ ಧನ ಸಹಾಯ (ಯುಜಿಸಿ) ರದ್ದುಗೊಳಿಸಿ ಹೊಸ ಸಂಸ್ಥೆ ಸೃಷ್ಟಿಸಲು ಮುಂದಾಗಿದೆ.

ಇನ್‌ಸ್ಪೆಕ್ಷನ್‌ ರಾಜ್‌ ಅನ್ನು ಅಂತ್ಯಗೊಳಿಸುವ ಉದ್ದೇಶದೊಂದಿಗೆ ಯುಜಿಸಿಯನ್ನು ರದ್ದುಗೊಳಿಸಿ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. 1956ರ ಯುಜಿಸಿ ಕಾಯ್ದೆ ರದ್ದುಗೊಳಿಸಿ, ಉನ್ನತ ಶಿಕ್ಷಣ ಆಯೋಗ ಸ್ಥಾಪನೆ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಬುಧವಾರ ಸಂಜೆ ಕರಡು ಕಾಯ್ದೆಯನ್ನು ಪ್ರಕಟಿಸಿದೆ.

ಯುಜಿಸಿ ರೀತಿ ಅನುದಾನ ಹಂಚಿಕೆ ಮಾಡುವ ಬದಲು ಉದ್ದೇಶಿತ ಉನ್ನತ ಶಿಕ್ಷಣ ಆಯೋಗ ಶೈಕ್ಷಣಿಕ ವಿಷಯಗಳ ಬಗ್ಗೆಯಷ್ಟೇ ಗಮನಹರಿಸಲಿದೆ. ಅನುದಾನ ಕುರಿತ ವಿಷಯಗಳು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಹಸ್ತಾಂತರಗೊಳ್ಳಲಿವೆ. ಶೈಕ್ಷಣಿಕ ಗುಣಮಟ್ಟಸುಧಾರಣೆ, ಶೈಕ್ಷಣಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಪರಿಶೀಲನೆ, ಪ್ರೋತ್ಸಾಹ, ಶಿಕ್ಷಕರಿಗೆ ತರಬೇತಿ, ಶೈಕ್ಷಣಿಕ ತಂತ್ರಜ್ಞಾನಗಳ ಬಳಕೆಗೆ ಉತ್ತೇಜನದಂತಹ ವಿಷಯಗಳ ಬಗ್ಗೆ ಆಯೋಗ ಒತ್ತು ನೀಡಲಿದೆ.

ಕರಡು ಕಾಯ್ದೆ ಕುರಿತಂತೆ ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಹಾಗೂ ಸಾರ್ವಜನಿಕರು ಜು.7ರ ಸಂಜೆ 5ರೊಳಗೆ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ. ಅಭಿಪ್ರಾಯ ಸಂಗ್ರಹದ ಬಳಿಕ ಅಗತ್ಯ ಬಿದ್ದರೆ ತಿದ್ದುಪಡಿ ಮಾಡಿ ಅದನ್ನು ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ಮಂಡಿಸುವ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಯುಜಿಜಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಕುರಿತು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಕಳೆದ ಬಜೆಟ್‌ನಲ್ಲಿ ಮಾಹಿತಿ ನೀಡಿದ್ದರು.

ನಿಯಂತ್ರಣಾ ವ್ಯವಸ್ಥೆಯಲ್ಲಿನ ಸುಧಾರಣೆ ತರುವುದು. ಈ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡುವ ಮತ್ತು ತನ್ಮೂಲಕ ಶೈಕ್ಷಣಿಕ ವಲಯದಲ್ಲಿ ತ್ವರಿತ ಮತ್ತು ಅತ್ಯುತ್ತಮ ಪ್ರಗತಿಗೆ ಒತ್ತು ನೀಡುವ ಸರ್ಕಾರದ ಆಶಯದಂತೆ ಈ ಕರಡು ಕಾಯ್ದೆ ರಚಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದು ಕರಡು ಕಾಯ್ದೆ ಕುರಿತು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಹಾಲಿ ವ್ಯವಸ್ಥೆಯಲ್ಲಿ ಯುಜಿಸಿ, ಶೈಕ್ಷಣಿಕ ಗುಣಮಟ್ಟಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ಕ್ರಮಗಳ ಬಗ್ಗೆ ಗಮನ ಹರಿಸುವುದಕ್ಕಿಂತ ಹೆಚ್ಚಿನ ಗಮನ ಕೇವಲ ಅನುದಾನ ಹಂಚಿಕೆ ಸೇರಿದಂತೆ ಇತರೆ ಕೆಲಸಗಳಿಗೆ ಸೀಮಿತ ಆಗಿದೆ. ಇದರಿಂದಾಗಿ ಶೈಕ್ಷಣಿಕ ವಲಯಕ್ಕೆ ಸಿಗಬೇಕಾದ ಅಗತ್ಯ ಒತ್ತು ಸಿಗುತ್ತಿಲ್ಲ ಎಂಬ ಆರೋಪವಿದೆ. ಈ ದೂರನ್ನು ಪರಿಹರಿಸಿ ಹೊಸ ವ್ಯವಸ್ಥೆ ರಚಿಸುವ ನಿಟ್ಟಿನಲ್ಲಿ ಯುಜಿಸಿ ರದ್ದು ಮಾಡಲು ಕೇಂದ್ರ ಸರ್ಕಾರದ ಪ್ರಸ್ತಾಪ.

ಹೊಸ ವ್ಯವಸ್ಥೆ ಏನು?

ಯುಜಿಸಿ ಬದಲು ರಚನೆಯಾಗುವ ಭಾರತೀಯ ಉನ್ನತ ಶಿಕ್ಷಣ ಆಯೋಗ, ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ವಿವಿಧ ನಿಯಂತ್ರಣಾ ವ್ಯವಸ್ಥೆಯ ಹಸ್ತಕ್ಷೇಪ ಕಡಿಮೆ ಮಾಡಲಿದೆ. ಈ ಮೂಲಕ ಅವುಗಳ ತ್ವರಿತ ಬೆಳವಣಿಗೆ ಅವಕಾಶ ಮಾಡಿಕೊಡಲಿದೆ. ಅನುದಾನ ಹಂಚಿಕೆಯಂಥ ಕೆಲಸದ ಬದಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಮತ್ತು ಅವುಗಳ ಶೈಕ್ಷಣಿಕ ಗುಣಮಟ್ಟಕಾಪಾಡುವ ಕೆಲಸ ಮಾಡಲಿದೆ ಎಂಬ ಚಿಂತನೆ ಕೇಂದ್ರದ್ದು.

Follow Us:
Download App:
  • android
  • ios