ಢಾಕಾ[ಜು.25]: ಬೃಹತ್‌ ಸೇತುವೆ ನಿರ್ಮಾಣಕ್ಕಾಗಿ ಮಕ್ಕಳನ್ನು ಅಪಹರಿಸಿ ಬಲಿ ನೀಡಲಾಗುತ್ತಿದೆ ಎಂಬ ವದಂತಿ ಮೇಲೆ 8 ಜನರನ್ನು ಬಡಿದು ಹತ್ಯೆ ಮಾಡಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಢಾಕಾದಲ್ಲಿ ಗಂಗಾ ನದಿ ಉಪನದಿಯಾದ ಪದ್ಮಾ ನದಿಗೆ ಅಡ್ಡಲಾಗಿ 21 ಸಾವಿರ ಕೋಟಿ ರು. ವೆಚ್ಚದ ಬೃಹತ್‌ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಯೋಜನೆಗಾಗಿ ಮಕ್ಕಳನ್ನು ಬಲಿ ಕೊಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಡಲಾಗಿದೆ.

ಈ ಶಂಕೆ ಹಿನ್ನೆಲೆಯಲ್ಲಿ 3 ಮಹಿಳೆಯರು ಸೇರಿ 8 ಜನರನ್ನು ಹತ್ಯೆ ಮಾಡಲಾಗಿದೆ. ಅಲ್ಲದೇ, ಇದೇ ವಿಷಯಕ್ಕಾಗಿ 30 ಜನರ ಮೇಲೆಯೂ ಹಲ್ಲೆ ನಡೆದಿದೆ. ಈ ಗಾಳಿಸುದ್ದಿಯನ್ನು ಹರಡದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ವದಂತಿ ಹಬ್ಬಿಸುತ್ತಿದ್ದ 25 ಯೂಟೂಬ್‌ ಚಾನೆಲ್‌, 60 ಫೇಸ್‌ಬುಕ್‌ ಪುಟ ಮತ್ತು 10 ಸುದ್ದಿಜಾಲತಾಣಗಳನ್ನು ನಿರ್ಬಂಧಿಸಲಾಗಿದೆ.