ಮೊಬೈಲ್‌ ವ್ಯಾಲೆಟ್‌ಗಳಿಗೆ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಮಾಹಿತಿಯನ್ನು ಅಪ್‌ಡೇಟ್‌ ಮಾಡಲು ಆರ್‌ಬಿಐ ವಿಧಿಸಿದ್ದ ಗಡುವು ಫೆ.28ರಂದು ಕೊನೆಗೊಂಡಿದೆ. ಹೀಗಾಗಿ ಪೇಟಿಎಂ ಮತ್ತು ಇತರ ಮೊಬೈಲ್‌ ವಾಲೆಟ್‌ಗಳಿಗೆ ತಮ್ಮ ಕೆವೈಸಿ ಮಾಹಿತಿಯನ್ನು ಅಪ್‌ಡೇಟ್‌ ಮಾಡದೇ ಇದ್ದವರು ವ್ಯಾಲೆಟ್‌ಗೆ ಹಣ ಹಾಕಲು ಮತ್ತು ಹಣವನ್ನು ಇತರರಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ.

ನವದೆಹಲಿ: ಮೊಬೈಲ್‌ ವ್ಯಾಲೆಟ್‌ಗಳಿಗೆ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಮಾಹಿತಿಯನ್ನು ಅಪ್‌ಡೇಟ್‌ ಮಾಡಲು ಆರ್‌ಬಿಐ ವಿಧಿಸಿದ್ದ ಗಡುವು ಫೆ.28ರಂದು ಕೊನೆಗೊಂಡಿದೆ. ಹೀಗಾಗಿ ಪೇಟಿಎಂ ಮತ್ತು ಇತರ ಮೊಬೈಲ್‌ ವಾಲೆಟ್‌ಗಳಿಗೆ ತಮ್ಮ ಕೆವೈಸಿ ಮಾಹಿತಿಯನ್ನು ಅಪ್‌ಡೇಟ್‌ ಮಾಡದೇ ಇದ್ದವರು ವ್ಯಾಲೆಟ್‌ಗೆ ಹಣ ಹಾಕಲು ಮತ್ತು ಹಣವನ್ನು ಇತರರಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ.

ಕೆವೈಸಿ ಸಲ್ಲಿಸುವುದು ಹೇಗೆ?:

ಮೊಬೈಲ್‌ ವ್ಯಾಲೆಟ್‌ ಆ್ಯಪ್‌ನ ಮೇಲ್ಭಾಗದಲ್ಲಿ ಕೆವೈಸಿ ಆಯ್ಕೆಯನ್ನು ನೀಡಲಾಗಿರುತ್ತದೆ. ಮೊದಲ ಪುಟದಲ್ಲಿ ಆಧಾರ್‌ ನಂಬರ್‌ ಮತ್ತು ಹೆಸರನ್ನು ನೀಡಬೇಕು. ಆಧಾರ್‌ ಇಲ್ಲವಾದಲ್ಲಿ ಪಾಸ್‌ಪೋರ್ಟ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌ ಮತ್ತು ನರೇಗಾ ಉದ್ಯೋಗ ಕಾರ್ಡ್‌ಗಳನ್ನು ಕೂಡ ಬಳಸಿಕೊಳ್ಳಬಹುದು.

ಕೇಳಲಾದ ಮಾಹಿತಿಯನ್ನು ಒದಗಿಸಿದ ಬಳಿಕ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಬೇಕು. ಬಳಿಕ ಖಾತರಿಗಾಗಿ ನಿಮ್ಮ ಆಧಾರ್‌ ಕಾರ್ಡ್‌ನ ಮಾದರಿ ಪ್ರದರ್ಶಿಸಲ್ಪಡುತ್ತದೆ. ತದನಂತರ ಪೋಷಕರ ಹೆಸರು, ವೈವಾಹಿಕ ಸಂಬಂಧ ಹಾಗೂ ಪಾನ್‌ ನಂಬರ್‌ ನೀಡಬೇಕು. ಅಂತಿಮ ಪರಿಶೀಲನೆಗಾಗಿ ಎರಡು ಹಂತಗಳನ್ನು ಪೂರೈಸಬೇಕು. ಭೀಮ್‌ ಯುಪಿಐ ಆ್ಯಪ್‌ ಮೂಲಕ ಅಥವಾ ವೈಯಕ್ತಿಕ ಪರಿಶೀಲನೆಯ ಮೂಲಕ ಕೆವೈಸಿ ಮಾಹಿತಿ ಪ್ರಕ್ರಿಯೆನ್ನು ಪೂರ್ಣಗೊಳಿಸಬಹುದು. ಇಲ್ಲವೇ ಆಧಾರ್‌ ಜೊತೆ ಲಿಂಕ್‌ ಆಗಿರುವ ಬ್ಯಾಂಕ್‌ ಖಾತೆಯನ್ನು ಭೀಮ್‌ ಯುಪಿಐ ಮೂಲಕ ಪೇಟಿಂ ಹಾಗೂ ಇತರ ಮೊಬೈಲ್‌ ವಾಲೆಟ್‌ಗಳಿಗೆ ಸಂಯೋಜಿಸಬಹುದು.

ನಿಮ್ಮ ವ್ಯಾಲೆಟ್‌ ಏನಾಗುತ್ತದೆ?:

ಒಂದು ವೇಳೆ ನೀವು ಕೆವೈಸಿ ಅಪ್‌ಡೇಟ್‌ ಮಾಡದೇ ಇದ್ದರೆ ನಿಮ್ಮ ವ್ಯಾಲೆಟ್‌ನಲ್ಲಿ ಹಣ ಇದ್ದರೂ ಅದನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಆದರೆ, ಇದರಿಂದ ನಿಮ್ಮ ವ್ಯಾಲೆಟ್‌ನಲ್ಲಿ ಈಗಾಗಲೇ ಇದ್ದ ಹಣಕ್ಕೆ ಯಾವುದೇ ತೊಂದರೆ ಇಲ್ಲ.