ಕುಂದಾಪುರ :  ಇದು ತಂತ್ರಜ್ಞಾನದ ಯುಗ. ಹೊಸ, ಹೊಸ ತಂತ್ರಜ್ಞಾನವುಳ್ಳ ಮೊಬೈಲ್‌ಗಳು ಮಾರುಕಟ್ಟೆಗೆ ಬಂದಾಗ ಜನರು ಅದನ್ನೇ ಮೆಚ್ಚಿಕೊಂಡು ಖರೀದಿಗೆ ಮುಂದಾಗುತ್ತಾರೆ. ಇದರಿಂದ ಹಳೆಯ ಫೋನ್‌ಗಳೆಲ್ಲವೂ ಮನೆಯ ಮೂಲೆಯಲ್ಲಿ ಬೀಳುತ್ತವೆ.

ಇಂತಹ ಹಳೆಯ ಮೊಬೈಲ್‌ ಫೋನ್‌ಗಳನ್ನು ಮರು ಬಳಕೆ ಮಾಡಿದರೆ ಹೇಗೆ? ಈ ಹಳೆಯ ಮೊಬೈಲ್‌ಗಳನ್ನೆಲ್ಲಾ ಒಂದುಗೂಡಿಸುವುದಾದರೂ ಹೇಗೆ ಎಂಬಿತ್ಯಾದಿ ಪ್ರಶ್ನೆ ಎದುರಾದಾಗ ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶದ ಮೊಬೈಲ್‌ ಅಂಗಡಿಯ ಮಾಲಿಕರೊಬ್ಬರಿಗೆ ಹೊಸ ಐಡಿಯಾವೊಂದು ಹೊಳೆಯಿತು, ಅದೇ ಮೊಬೈಲ್‌ ಎಸೆತ ಸ್ಪರ್ಧೆ.

ಹಳೆಯ ಮೊಬೈಲ್‌ ಫೋನ್‌ಗಳನ್ನು ಮರುಬಳಕೆ ಮಾಡುವ ಸದುದ್ದೇಶದಿಂದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗೋಳಿಯಂಗಡಿಯ ಮೊಬೈಲ್‌ ಅಂಗಡಿ ಮಾಲಿಕರೊಬ್ಬರು ಸಾರ್ವಜನಿಕರಿಗಾಗಿ ‘ಮೊಬೈಲ್‌ ಫೋನ್‌ ಎಸೆತ ಸ್ಪರ್ಧೆ’ ಆಯೋಜಿಸಿ ಗಮನ ಸೆಳೆದಿದ್ದಾರೆ. ಈ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಸಾಕಷ್ಟುಸದ್ದು ಮಾಡುತ್ತಿದೆ.

ಪ್ರಗತಿ ಎಂಟರ್‌ಪ್ರೈಸಸ್‌ ಮೊಬೈಲ್‌ ಅಂಗಡಿ ಮಾಲಿಕ ರೂಪೇಶ್‌ ಕುಮಾರ್‌ ಈ ವಿಭಿನ್ನ ಸ್ಪರ್ಧೆಯನ್ನು ಸಂಘಟಿಸುತ್ತಿದ್ದಾರೆ. ಪ್ರಗತಿ ಎಂಟರ್‌ಪ್ರೈಸಸ್‌ ಹಾಗೂ ವಂಡಾರು ಮಾವಿನಕಟ್ಟೆಶಾಖೆಗಳ ಸಹಯೋಗದೊಂದಿಗೆ ಗೋಳಿಯಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಅ.7ರಂದು ಭಾನುವಾರ ಬೆಳಗ್ಗೆ 9.30ರಿಂದ ಸಂಜೆ 4ರವರೆಗೂ ಸ್ಪರ್ಧೆ ನಡೆಯಲಿದೆ. ಯಾರು ಅತಿ ಹೆಚ್ಚು ದೂರಕ್ಕೆ ಮೊಬೈಲ್‌ ಎಸೆಯುತ್ತಾರೋ ಅವರೇ ಸ್ಪರ್ಧೆಯ ವಿಜೇತರು. ಪ್ರಥಮ ಬಹುಮಾನವಾಗಿ 4ಜಿ ಸ್ಮಾರ್ಟ್‌ ಫೋನ್‌ ಹಾಗೂ ದ್ವಿತೀಯ ಬಹುಮಾನವಾಗಿ ಆ್ಯಂಡ್ರಾಯ್ಡ್‌ ಮೊಬೈಲ್‌ ನೀಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.


ಶ್ರೀಕಾಂತ ಹೆಮ್ಮಾಡಿ