‘‘ನೇರ ನುಡಿಗೆ ಹೆಸರಾಗಿದ್ದ, ತಮ್ಮ ಸಿದ್ಧಾಂತಕ್ಕೆ ಯಾವತ್ತೂ ಬದ್ಧರಾಗಿದ್ದ, ವೈಚಾರಿಕ ನಿಲುವು ಹೊಂದಿದ್ದ ತಂದೆಯವರು ಇಲ್ಲವಾಗಿ ವರ್ಷ ಕಳೆಯಿತು. ಆದರೆ, ಅವರು ಸಾಹಿತ್ಯ ಮತ್ತು ಚಿಂತನೆಗಳ ಮೂಲಕ ಜೀವಂತವಾಗಿದ್ದಾರೆ. ಅವರನ್ನು ಕೊಂದಿರುವ ಹಾಗೂ ಕೊಲ್ಲಿಸಿರುವರು ಇದ್ದೂ ಸತ್ತಂತಿದ್ದಾರೆ,’’ ಎಂದು ಶ್ರೀವಿಜಯ ಆಕ್ರೋಶ ವ್ಯಕ್ತಪಡಿಸಿದರು.

‘‘ನನ್ನ ತಂದೆಯವರಿಗೆ ಹೇಡಿಗಳು ಹೊಡೆದ ಗುಂಡಿನ ಗಾಯ ಇನ್ನೂ ಮನದಲ್ಲಿ ಹಸಿಯಾಗಿದೆ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆ. ಭೌತಿಕವಾಗಿ ಅವರು ನಮ್ಮ ಜತೆ ಇರದಿದ್ದರೂ ಅವರ ಮಾತು ಹಾಗೂ ಅಕ್ಷರಗಳ ರೂಪದಲ್ಲಿ ಬಿತ್ತಿ ಹೋದ ಚಿಂತನೆಗಳು ಜೀವಂತವಾಗಿವೆ. ಅವರ ಸಿದ್ಧಾಂತಗಳ ಮೂಲಕವೇ ಹೋರಾಟ ಮುಂದುವರಿಸುತ್ತೇವೆ.’’

ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಅವರ ಬಂದೂಕಿನೆದುರಿನ ಮಾತುಗಳಿವು.

‘‘ನೇರ ನುಡಿಗೆ ಹೆಸರಾಗಿದ್ದ, ತಮ್ಮ ಸಿದ್ಧಾಂತಕ್ಕೆ ಯಾವತ್ತೂ ಬದ್ಧರಾಗಿದ್ದ, ವೈಚಾರಿಕ ನಿಲುವು ಹೊಂದಿದ್ದ ತಂದೆಯವರು ಇಲ್ಲವಾಗಿ ವರ್ಷ ಕಳೆಯಿತು. ಆದರೆ, ಅವರು ಸಾಹಿತ್ಯ ಮತ್ತು ಚಿಂತನೆಗಳ ಮೂಲಕ ಜೀವಂತವಾಗಿದ್ದಾರೆ. ಅವರನ್ನು ಕೊಂದಿರುವ ಹಾಗೂ ಕೊಲ್ಲಿಸಿರುವರು ಇದ್ದೂ ಸತ್ತಂತಿದ್ದಾರೆ,’’ ಎಂದು ಶ್ರೀವಿಜಯ ಆಕ್ರೋಶ ವ್ಯಕ್ತಪಡಿಸಿದರು.

ವಿಚಾರವಾದಿ ದಿ.ಗೋವಿಂದ ಪಾನ್ಸರೆ ಪುತ್ರಿ ಮೇಘನಾ ಪಾನ್ಸರೆ ಮಾತನಾಡಿ, ‘‘ತಂದೆ ಗೋವಿಂದ ಪಾನ್ಸರೆ ಹಾಗೂ ದಾಭೋಲ್ಕರ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಕನಿಷ್ಠ ಒಬ್ಬೊಬ್ಬ ಆರೋಪಿಗಳನ್ನಾದರೂ ಬಂಧಿಸಿ ವಿಚಾರಿಸುತ್ತಿದೆ. ಆದರೆ, ಕಲಬುರ್ಗಿ ಅವರ ಹತ್ಯೆಯಾಗಿ ವರ್ಷ ಕಳೆದರೂ ಹಂತಕರ ಸುಳಿವಿಲ್ಲ. ಅವರನ್ನು ಬಂಧಿಸುವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ಕರ್ನಾಟಕ ಸರ್ಕಾರ ಕಲಬುರ್ಗಿ ಹತ್ಯೆ ಪ್ರಕರಣವನ್ನು ೧೫ ದಿನಗಳಲ್ಲಿ ಬಹಿರಂಗಪಡಿಸಬೇಕು. ಇಲ್ಲ ತನಿಖೆ ಮಾಡಲು ವಿಫಲರಾಗಿದ್ದೇವೆಂದು ಒಪ್ಪಿಕೊಳ್ಳಲಿ,’’ ಎಂದು ಸವಾಲು ಹಾಕಿದರು.

ದಿ. ನರೇಂದ್ರ ದಾಭೋಲ್ಕರ್ ಪುತ್ರಿ ಮುಕ್ತಾ ದಾಭೋಲ್ಕರ ಮಾತನಾಡಿ, ‘‘ಈ ಮೂವರು ಚಿಂತಕರ ಹತ್ಯೆಗಳಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಖುಷಿ ಹಂಚಿಕೊಂಡರು. ವೈಚಾರಿಕತೆಯ ಅಂತ್ಯ ಎಂದು ಹೇಳಿಕೊಂಡರು. ಇದು ಭಾರತೀಯ ಸಂಸ್ಕೃತಿ ಅಲ್ಲ. ಬಂದೂಕಿನ ಗುಂಡುಗಳು ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ, ಚಿಂತನೆಗಳನ್ನು ಅಲ್ಲ. ಈ ಗುಂಡುಗಳು ಚಿಂತನೆಗಳನ್ನು ಎಂದಿಗೂ ಮೌನವಾಗಿಸುವುದಿಲ್ಲ,’’ ಎಂದರು.